ಲಕ್ಷ್ಮೀದೇವಿ, ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ
ಹೊಳೆನರಸೀಪುರ: ಪಟ್ಟಣದ ಅಂಬೇಡ್ಕರ್ ನಗರದ ಶ್ರೀ ಲಕ್ಷ್ಮಿದೇವಿ, ಶ್ರೀ ವೀರಭದ್ರಸ್ವಾಮಿ ಅದ್ದೂರಿ ಜಾತ್ರಾ ಮಹೋತ್ಸವ ಮೇ23 ರಿಂದ ಮೇ 25ರವರಗೆ ಮೂರು ದಿನ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ 23 ರಂದು ಬೆಳಗ್ಗೆ 5ಕ್ಕೆ ಹೇಮಾವತಿ ನದಿಯಿಂದ ಕಳಸಗಳನ್ನು ತರುವುದು, ಮದ್ಯಾಹ್ನ ಒಂದು ಗಂಟೆಗೆ ಶ್ರೀಲಕ್ಷ್ಮೀದೇವಿ, ಶ್ರೀವೀರಭದ್ರಸ್ವಾಮಿ ಹಾಗೂ ಗಣಪತಿ ದೇವರಿಗೆ ಅಭಿಷೇಕ ಮತ್ತು ಹೋಮ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಮಹೋತ್ಸವದ ಉಸ್ತುವಾರಿ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಮೇ.24 ರಂದು ಬೆಳಗ್ಗೆ ವಿಶೇಷ ಪೂಜೆ, ನಂತರ ಮದ್ಯಾಹ್ನ ಎರಡು ಗಂಟೆಗೆ ಶ್ರೀಲಕ್ಷ್ಮೀದೇವಿ ಮತ್ತು ಶ್ರೀ ವೀರಭದ್ರಸ್ವಾಮಿಗಳ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆ. ಭಾನುವಾರ ಬೆಳಗ್ಗೆ ಶ್ರೀಲಕ್ಷ್ಮೀದೇವಿ ಅಮ್ಮನವರನ್ನು ಮನೆ ಮನೆಗೆ ಕರೆದೊಯ್ದು ಮಡಿಲಕ್ಕಿ ತುಂಬುವ ಕಾರ್ಯಕ್ರಮವಿದೆ. ಮೂರು ದಿನಗಳ ಕಾಲ ಶ್ರೀಲಕ್ಷ್ಮೀದೇವಿ ಮತ್ತು ಶ್ರೀವೀರಭದ್ರಸ್ವಾಮಿಗೆ ವಿಶೇಷ ಪೂಜೆಗಳು ನಡೆಯಲಿದೆ ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.