ಹಾಳಾಗುತ್ತಿರುವ ಪಾದಚಾರಿ ಮಾರ್ಗ
ಅರಸೀಕೆರೆ: ಅರಸೀಕೆರೆ ಪಟ್ಟಣದ ಕಂತೇನಹಳ್ಳಿ ಕೆರೆ ಬಳಿ ಇತ್ತೀಚೆಗೆ ನಿರ್ಮಿಸಿರುವ ಉದ್ಯಾನವನವು ಪಟ್ಟಣದ ಜನತೆಗೆ ವಾಯುವಿಹಾರಕ್ಕೆ ಅತ್ಯಂತ ಪ್ರಶಸ್ತ ತಾಣವಾಗಿದೆ.
ಈ ಉದ್ಯಾನದಲ್ಲಿ ವಾಯುವಿಹಾರಿಗಳಿಗೆ ಓಡಾಡಲು ಸಿಮೆಂಟ್ ಟ್ರ್ಯಾಕ್ಗಳಿಂದ ನಿರ್ಮಿಸಿರುವ ಮಾರ್ಗದಲ್ಲಿ ವಾಹನಗಳ ಸಂಚಾರ ತಡೆಗಟ್ಟುವ ಸಲುವಾಗಿ ಅಲ್ಲಲ್ಲಿ ಸಿಮೆಂಟ್ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ದ್ವಿಚಕ್ರವಾಹನ ಸವಾರರು ತಮ್ಮ ವಾಹನಗಳಲ್ಲಿ ಈ ಪಾದಚಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದು, ವಾಹನ ಓಡಾಟಕ್ಕೆ ಅಡ್ಡಿಯಾಗಿರುವ ಬ್ಯಾರಿಕೇಡ್ಗಳನ್ನು ಮುರಿದುಹಾಕಿದ್ದಾರೆ.
ಈ ವಾಹನ ಸಂಚಾರದಿಂದ ಸಿಮೆಂಟ್ ಟ್ರ್ಯಾಕ್ಗಳು ಅಲ್ಲಲ್ಲಿ ಒಡೆದು ಹೋಗಿದ್ದರೆ, ಮತ್ತಷ್ಟು ಕಡೆ ಸಡಿಲಗೊಂಡಿದೆ. ಇದು ಹೀಗೇ ಮುಂದುವರಿದರೆ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಕಿತ್ತುಹೋಗಿ ಉದ್ಯಾನದ ಸೌಂದರ್ಯವೂ ಹಾಳಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಂಡು, ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.