3 ತಿಂಗಳಾದರೂ ರಸ್ತೆ ದುರಸ್ತಿ ಇಲ್ಲ
ಜಾವಗಲ್: ಪಟ್ಟಣದ ದರ್ಗಾದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಮಾಡುವ ಸಲುವಾಗಿ ರಸ್ತೆಯನ್ನು 4 ಅಡಿ ಆಳದಷ್ಟು ಅಗೆದು 3 ತಿಂಗಳು ಕಳೆದರೂ ದುರಸ್ತಿ ಮಾಡದಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.
ಎರಡೂ ಬದಿಗಳಲ್ಲಿನ ಅಂಗಡಿ ಹಾಗೂ ದರ್ಗಾಕ್ಕೆ ಹೋಗಲು ಮಕ್ಕಳು ಹಾಗೂ ವೃದ್ದರು ಹರಸಾಹಸ ಪಡಬೇಕಾಗಿದೆ. ದರ್ಗಾಕ್ಕೆ ಬರುವ ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ಗಂಟೆಗಟ್ಟಲೆ ನಿಲ್ಲಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ಮಾಮೂಲಿ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ.
ಬುಧವಾರ ಬಿದ್ದ ಸೋನೆ ಮಳೆಗೆ ರಸ್ತೆ ಕೆಸರು ಗದ್ದೆಯಂತಾಗಿದೆ. ರಸ್ತೆಯ ಉದಕ್ಕೂ ಅಲ್ಲಲ್ಲಿ ಗಲೀಜು ನೀರು ಮತ್ತು ತ್ಯಾಜ್ಯ ವಸ್ತುಗಳು ಶೇಖರಣೆಯಾಗಿ ಸುತ್ತಲ ಪರಿಸರ ಹಾಳುಮಾಡುತ್ತಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿನ ಸುಮಾರು 1 ಫರ್ಲಾಂಗ್ ರಸ್ತೆ ಮಳೆಯ ಕೊಚ್ಚೆ ಮತ್ತು ಕೆಸರಿನಿಂದ ಕೂಡಿದ್ದು ಜೊತೆಗೆ ಮೋರಿಯಲ್ಲಿ ಹರಿದು ಬರುವ ತ್ಯಾಜ್ಯವಸ್ತುಗಳಿಂದ ಆವರಿಸಿ ಹೊಂಡದಂತಾಗಿದೆ. ದ್ವಿಚಕ್ರ ವಾಹನಸವಾರರು ಸೇರಿದಂತೆ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತಿದೆ. ಈ ರಸ್ತೆ ಕಾಮಗಾರಿ ಪ್ರಾರಂಭವಾಗಿ 2 ವರ್ಷಗಳಾದರೂ ಪೂರ್ಣಗೊಳ್ಳದೆ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಕಾಮಗಾರಿಯ ವಿಳಂಬದ ಬಗ್ಗೆ ಸಂಬಂಧಿಸಿದ ಎಂಜಿನಿಯರ್ಗಳನ್ನು ವಿಚಾರಿಸಿದರೆ ಗುತ್ತಿಗೆದಾರರು ನಿಧಾನ ಮಾಡುತ್ತಿದ್ದಾರೆಂದು ತಿಳಿಸಿ ಅವರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ನೋಟಿಸ್ ನೀಡಿರುವುದಾಗಿ ತಿಳಿಸುತ್ತಾರೆ. ಆದರೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ಪ್ರತಿ ನಿತ್ಯ ಬವಣೆಪಡುವಂತಾಗಿದೆ. ಸಂಬಂಧಿಸಿದ ಎಂಜಿನಿಯರ್ಗಳು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ 2 ವರ್ಷದಿಂದ ಸಾರ್ವಜನಿಕರು ಅನುಭವಿಸುತ್ತಿರುವ ಬವಣೆ ನಿವಾರಿಸಬೇಕೆಂದು ಜಾವಗಲ್ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.