ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ: ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮನವಿ

Mainashree
Updated On : 23 May 2014, 11:13 am

ಅರಸೀಕೆರೆ : ಪಟ್ಟಣದ ಹೃದಯ ಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ನ್ನು ಮೇಲ್ದರ್ಜೆಗೇರಿಸಿ ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮಂಜೂರು ನೀಡಿದ್ದು ಇದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಪಟೇಲ್ ಶಿವಪ್ಪ ಹಾಗೂ ಬ್ಲಾಕ್ ಕಾಗ್ರೆಸ್ ಅಧ್ಯಕ್ಷ ಗಂಜೀಗೆರೆ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸಚಿವ ಎಚ್.ಸಿ.ಮಹದೇವಪ್ಪರನ್ನು ಭೇಟಿ ಮಾಡಿ ಪಟ್ಟಣದಲ್ಲಿ ರಸ್ತೆ ಅಗಲೀಕರಣದಿಂದ ವ್ಯಾಪಾರಸ್ಥರು, ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಬೈಪಾಸ್ ರಸ್ತೆಗೆ ಮಂಜೂರಾತಿ ನೀಡಬೇಕೆಂಬ ಮನವಿಗೆ  ಸ್ಪಂದಿಸಿದ ಸಚಿವರು ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿಗೆ ಆದೇಶ ನೀಡಿ ಸರ್ವೇ ಕಾರ್ಯ ಆರಂಭಿಸುವಂತೆ ಸೂಚನೆ ನೀಡಿದ್ದಾರೆ ಎಂದರು.
ಇದಕ್ಕೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಬಿ ಶಿವರಾಂ ಹಾಗೂ ಶಾಸಕ ಎ.ಮಂಜು ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ತಾಲೂಕಿನ ಬಾಣಾವರದಿಂದ ಹುಳಿಯಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಸ್ಥಗಿತಗೊಳ್ಳಲು ಶಾಸಕ ಕೆ.ಎಂ.ಶಿವಲಿಂಗೇಗೌಡರೇ ನೇರ ಹೊಣೆಗಾರರಾಗಿದ್ದಾರೆ. ಈ ಕಾಮಗಾರಿಯನ್ನು ಹೈದಾರಾಬಾದ್ ಮೂಲದ ಎಎಸ್ಐಪಿ ಕಂಪನಿಗೆ ಗುತ್ತಿಗೆ ನೀಡಿ, ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಲ್ಲುಸಾದರಹಳ್ಳಿ ಸಮೀಪದ ಸೋಮಶೆಟ್ಟಿಹಳ್ಳಿ ಕಲ್ಲುಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಅದನ್ನು ದುರುಪಯೋಗಪಡಿಸಿಕೊಂಡ ಶಾಸಕರು ಅಲ್ಲಿನ ಜಲ್ಲಿ ಕ್ರಷರ್ನಿಂದ  ತಾಲೂಕಿನ ಎಲ್ಲಾ ಕಾಮಗಾರಿಗಳಿಗೆ ಜಲ್ಲಿ ಕಲ್ಲು ಬಳಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಲುಗಡೆಯಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಈ ಕಾಮಗಾರಿಗಾಗಿ ಬಾಣಾವರದಿಂದ ಹುಳಿಯಾರುವರೆಗೆ ಸುಮಾರು 50 ಕಿ.ಮೀ. ರಸ್ತೆಯನ್ನು ಅಗೆದು ಬಿಟ್ಟಿರುವುದರಿಂದ ವಾಹನಗಳು ಚಲಿಸುವಾಗ ರಸ್ತೆಯಲ್ಲಿ ಧೂಳು ಎದ್ದು ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ರೋಗರುಜಿನಗಳಿಗೆ ಕಾರಣವಾಗಿದೆಯಲ್ಲದೆ ಹಲವಾರು ಅಪಘಾತಗಳೂ ಉಂಟಾಗಿದ್ದು ಈ ರಸ್ತೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ ಹಾಗೂ ಶೀಘ್ರವೇ ಕಾಮಗಾರಿ ಪುನರಾರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಶಾಸಕರಾಗಲಿ, ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸೌಜನ್ಯಕ್ಕಾದರೂ ಅವರನ್ನು ಮಾತನಾಡಿಸಲು ಹೋಗಿಲ್ಲ ಎಂದು ದೂರಿದರು.
ಕೆಪಿಸಿಸಿ ಸದಸ್ಯ ಎಚ್.ಜಿ.ರೇವಣ್ಣ, ತಾಲೂಕು ಎಸ್.ಸಿ.ಘಟಕದ ಪ್ರಧಾನ ಕಾರ್ಯದರ್ಶಿ ಮಾಡಾಳು ಚಂದ್ರಪ್ಪ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೋಡಿಹಳ್ಳಿ ರಘು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement