ಅರ್ಹ ಫಲಾನುಭವಿಗಳಿಗೆ ಸವಲತ್ತು ದೊರೆಯಲಿ
ಆಲೂರು: ಸರ್ಕಾರಿ ಇಲಾಖೆಗಳಿಂದ ದೊರೆಯುವ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇದಕ್ಕೆ ತಾಲೂಕು ಪಂಚಾಯಿತಿ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕೆಂದು ತಾ.ಪಂ.ಅಧ್ಯಕ್ಷೆ ಯಶೋಧ ತಿಳಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಸೆಸ್ ಹಾಗೂ ಜಿಲ್ಲಾ ಪಂಚಾಯಿತಿಯವರು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಗ್ರಾ.ಪಂ.ನವರೊಂದಿಗೆ ಸಹಕರಿಸಿ ಜನ ಜಾನುವಾರುಗಳಿಗೆ ಶುದ್ದ ಕುಡಿಯುವ ನೀರು ದೊರಕುವಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದರು.
ಸದಸ್ಯ ಜಿ.ಆರ್.ರಂಗನಾಥ್ ಮಾತನಾಡಿ, ಕಳೆದ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆತಿರುವ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಬೇಕು ಕೈಗಾರಿಕಾ ಇಲಾಖೆಯಲ್ಲಿ ಯಾರೊಬ್ಬರೂ ಇರುವುದಿಲ್ಲ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳಿಗಾಗಿ ರೈತರು ತಿಂಗಳುಗಟ್ಟಳೆ ಅಲೆಯಬೇಕು ಕಾವೇರಿ ನಿಗಮದವರು ಲೂಟಿಕೋರರಾಗಿದ್ದು ಮಧ್ಯವರ್ತಿಗಳನ್ನಿಟ್ಟುಕೊಂಡು ಹಗಲು ದರೋಡೆ ಇಳಿದಿದ್ದಾರೆ. ಅವರು ಯಾವುದೇ ಮೀಟಿಂಗ್‌ಗಳಿಗೆ ಬರುವುದಿಲ್ಲ ಅವರಿಗೆ ನೋಟೀಸ್ ನೀಡಬೇಕೆಂದ ಅವರು ಎಚ್.ಆರ್.ಪಿ.ಯಲ್ಲಿ ಕಳಪೆ ಕಾಮಗಾರಿ ನಡೆಸಿ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದಾರೆ. ಕಾಡಾ ಅಧಿಕಾರಿಯನ್ನು ಮುಂದಿನ ಮೀಟಿಂಗ್‌ಗೆ ಕರೆಸುವಂತೆ ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.
ಸದಸ್ಯ ಕೆ.ಎನ್.ಕಾಂತರಾಜ್ ಮಾತನಾಡಿ, ತೋಟಗಾರಿಕೆಯಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಸದಸ್ಯರಿಗೆ ತಿಳಿಸುವುದಿಲ್ಲ ಇಲಾಖೆಯ ಸೌಲಭ್ಯಗಳು ಪ್ರತಿ ಬಾರಿಯೂ ಸಿಕ್ಕವರಿಗೇ ಸಿಗುತ್ತಿವೆ ಇಲ್ಲಿನ ಸೌಲಭ್ಯಗಳು ಕೆಲವರಿಗೆ ಫಿಕ್ಸ್ ಆಗಿವೆ ಇದು ಸಲ್ಲದು ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕೆಂದರು.
ತಹಸೀಲ್ದಾರ್ ಮಹದೇವಯ್ಯ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾ ಗಿದೆ ಸಬ್ಸಿಡಿಗಾಗಿ 2 ಕೋಟಿ, 25 ಲಕ್ಷದ 96 ಸಾವಿರ ಬಿಡುಗಡೆಯಾಗಿದೆ. ಶೀಘ್ರಗೊಬ್ಬರ ವ್ಯಾಪಾರಿಗಳ ಸಭೆ ಕರೆದು ಗೊಬ್ಬರ ನಿಗದಿತ ಬೆಲೆಗೆ ಮಾರಾಟ ಮಾಡಲು ತಿಳಿಸಲಾಗುವುದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ಲೈಸೆನ್ ರದ್ದುಗೊಳಿಸಲಾಗುವುದು ಎಂದರು.
2011ರ ಜನಗಣತಿಯ ಪ್ರಕಾರ ಜಿ.ಪಂ. ತಾ.ಪಂ. ಹಾಗೂ ಗ್ರಾ.ಪಂ. ಕ್ಷೇತ್ರಗಳ ಪುನರ್‌ವಿಂಗಡನೆ ಮಾಡಬೇಕಿದ್ದು ಸದಸ್ಯರು ಸಹಕಾರ ನೀಡುವಂತೆ ಕೋರಿದರು.
ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ಜೀವನ್, ಎಸ್.ಸಿ. ಕಾಂತರಾಜು, ಐ.ಎನ್, ಸರೋಜ, ರೇಣುಕಾ, ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ್ ಇತರರು ಇದ್ದರು.