ಪೊಲೀಸರ ವಿರುದ್ಧ ಸಿಎಂಗೆ ದಸಂಸ ದೂರು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಅವಕಾಶ ನೀಡದ ಪೊಲೀಸರ ವಿರುದ್ಧ ಶುಕ್ರವಾರ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟಿಸಿದರು. ನಗರದ ರಾಮಕೃಷ್ಣನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ಎದುರು ದಸಂಸ ಕಾರ್ಯಕರ್ತರು ಮನವಿ ಸಲ್ಲಿಸಲು ಜಮಾಯಿಸಿದ್ದರು. ಆದರೆ, ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡಿದೆ, ಕಟಕಟೆ ಹಾಕಿ ತಡೆದರು. ಇದರಿಂದ ಆಕ್ರೋಶಗೊಂಡ ದಸಂಸ ಕಾರ್ಯಕರ್ತರು, ಪೊಲೀಸರು ವಿರುದ್ಧ ಪ್ರತಿಭಟಿಸಿ ಘೋಷಣೆ ಕೂಗಿದರು. ಈ ವಿಚಾರ ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸಂಸ ಕಾರ್ಯಕರ್ತರನ್ನು ಮನೆಯೊಳಗೆ ಕರೆಸಿಕೊಂಡು ಮಾತುಕತೆ ನಡೆಸಿದರು.
ದಸಂಸ ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ವಿಭಾಗೀಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ಬೆಲವತ್ತ ರಾಮಚಂದ್ರ, ಸೋಮಯ್ಯ ಮಲೆಯೂರು, ಪಿ. ಮಹದೇವ್, ಐಲಾಪುರ ರಾಮು, ಕೋಟೆ ಶಿವಣ್ಣ, ಆಲಗೂಡು ಶಿವಣ್ಣ, ಶಾದನಳ್ಳಿ ನಾರಾಯಣ ಮತ್ತಿತರರು ಇದ್ದರು.