ಸಂಗೀತೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಅ.ರಾ.ಸುಬ್ಬರಾವ್.
ಅರಕಲಗೂಡು: ಕರ್ನಾಟಕದ ತಿರುವಯ್ಯಾರ್ ಎಂದೇ ಖ್ಯಾತವಾಗಿರುವ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಶುಕ್ರವಾರ ಸಂಜೆ 13ನೇ ಸಂಗೀತೋತ್ಸವಕ್ಕೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ನ ಅಧ್ಯಕ್ಷರೂ ಆದ ಗಾನಕಲಾಭೂಷಣ ಆರ್.ಕೆ.ಪದ್ಮನಾಭ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾವೇರಿ ತಟದಲ್ಲಿರುವ ವಿಶ್ವವಿಖ್ಯಾತ ಸಪ್ತಸ್ವರ ದೇವತಾ ಮಂದಿರದ ಸಮೀಪವೇ ನಿರ್ಮಾಣಗೊಂಡಿರುವ ಬೃಹತ್ ವೇದಿಕೆಯಲ್ಲಿ ಆರಂಭಗೊಂಡ ಕಾರ್ಯಕ್ರಮ ವೀಕ್ಷಿಸಲು ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಸಂಗೀತಾಸಕ್ತರು ಗ್ರಾಮಕ್ಕೆ ಆಗಮಿಸಿದ್ದಾರೆ. ಅದೇ ರೀತಿ ಸಂಗೀತೋಪಾಸಕರನ್ನು ತಣಿಸಲು ನೂರಾರು ಸಂಗೀತ ವಿದ್ವಾಂಸರೂ ಸಂಗೀತ ಗ್ರಾಮಕ್ಕೆ ಆಗಮಿಸಿದ್ದಾರೆ.
ಗ್ರಾಮದ ತುಂಬೆಲ್ಲಾ ತಳಿರು ತೋರಣಗಳಿಂದ ಅಂಲಂಕೃತಗೊಂಡರೆ, ಮತ್ತೊಂದೆಡೆ ವಿದ್ಯುತ್ ದೀಪಗಳಿಂದ ಗ್ರಾಮ ಜಗಮಗಿಸುತ್ತಿದೆ. ಒಂದು ವರ್ಷಕ್ಕಿಂತ ಮತ್ತೊಂದು ವರ್ಷದ ಸಂಗೀತೋತ್ಸವ ಹೆಚ್ಚು ಎನ್ನುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಕ್ಕೆ ಬರುವ ಹೊಸಬರು, ಹಳಬರು ಎಲ್ಲರೂ ಒಂದೇ ಎನ್ನುವ ರೀತಿಯಲ್ಲಿ ನೂರಾರು ಕಾರ್ಯಕರ್ತರು ಸಂಗೀತೋತ್ಸವಕ್ಕೆ ಬರುವವರನ್ನು ಅಕ್ಕರೆಯಿಂದ ಬರಮಾಡಿಕೊಳ್ಳುವ ವೈಖರಿ, ಆತ್ಮೀಯತೆ ಮತ್ತೊಮ್ಮೆ ಗ್ರಾಮಕ್ಕೆ ಬರಬೇಕು ಎನ್ನುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.
ದೇಶ, ವಿದೇಶಿಯರನ್ನು ಕೈ ಬೀಸಿ ಕರೆಯುವ ಸಪ್ತಸ್ವರ ದೇವತಾ ಮಂದಿರದ ವೀಕ್ಷಣೆಯ ನೆಪದಲ್ಲೂ ಪ್ರವಾಸೀ ತಾಣವಾಗಿ ಜನರು ಕಾರ್ಯಕ್ರಮದತ್ತ ಹರಿದು ಬರುತ್ತಿದ್ದಾರೆ. ಶುಕ್ರವಾರ ಸಂಜೆ ಸಪ್ತಸ್ವರ ದೇವತಾ ಮಂದಿರಕ್ಕೆ ಆಗಮಿಸಿ, ನಂತರ ವೇದಿಕೆಗೆ ಆಗಮಿಸಿದ ವಿದ್ವಾನ್ ಆರ್.ಕೆ.ಪದ್ಮನಾಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಮಾರಿ ವೈಷ್ಣವಿ ದತ್ತ ಕಾರ್ಯಕ್ರಮದ ಆರಂಭದಲ್ಲೇ ತಮ್ಮ ಗಾಯನದ ಮೂಲಕ ಕಲಾ ರಸಿಕರನ್ನು ತಲೆದೂಗುವಂತೆ ಮಾಡಿದರು.
ವಿದ್ವಾನ್ ಆರ್.ಕೆ.ಪ್ರಸನ್ನ ಕುಮಾರ್ ಅವರ ಮಕ್ಕಳಾದ ಮಾ.ಆರ್.ಪಿ.ಪ್ರಶಾಂತ್ ಮತ್ತು ಮಾ. ಆರ್.ಪಿ.ಪ್ರಮೋದ್ ರುದ್ರಪಟ್ಟಣ ವೀಣಾ ಸಹೋದರರು ಎಂದೇ ಖ್ಯಾತರು) ಇವರಿಂದ ದ್ವಂದ್ವ ವೀಣಾ ವಾದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುಮಾರು 30 ನಿಮಿಷಗಳ ಕಾಲ ನಡೆದ ಕಾರ್ಯಕ್ರಮ ಅಲ್ಲಿದ್ದ ಕಲಾರಸಿಕರನ್ನು ಹಿಡಿದಿಟ್ಟತ್ತು. ಇದೇ ವೇದಿಕೆಯಿಂದ ಹಾಸನದ ಕುಮಾರಿ ಬಿಂದು, ಕು.ಸಿಂಧು ಮತ್ತು ಕುಮಾರಿ ವಿಭಾಶ್ರೀ ಅವರ ಗಾಯನದ ಅವಧಿ ಒಂದೆಡೆಯಾದರೆ ಬೆಂಗಳೂರಿನ ಕು.ಅಪೂರ್ವ ಅವರದು ಸರದಿಯ ಅವಧಿ. ಇದೇ ವೇದಿಕೆಯಲ್ಲಿ ಹಾಸನದ ಕುಮಾರಿ ಹಂಸಾ ನಟರಾಜ್ ಅವರಿಂದ ನೃತ್ಯ ಕಾರ್ಯಕ್ರಮಗಳು ಏರ್ಪಟ್ಟಿದ್ದವು.
ಭರ್ಜರಿ ಭೋಜನ
ಈ ಬಾರಿಯ ಸಂಗೀತೋತ್ಸವ ಕೇವಲ ಸಂಗೀತ ರಸದೌತಣಕ್ಕೆ ಸೀಮಿತಗೊಂಡಿಲ್ಲ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುವ ಎಲ್ಲ ಕಲಾ ಪೋಷಕರು, ಕಲೋಪಾಸಕರಿಗೂ ಹೊಟ್ಟೆ ತುಂಬ ಬಗೆಬಗೆಯ ರಸ ಕವಳವನ್ನೂ ಸಿದ್ದಪಡಿಸಿ ಉಣಬಡಿಸುವುದು ಇಲ್ಲಿ ನಡೆದು ಬಂದಿರುವ ಪದ್ದತಿ. ಅದರಂತೆ ಈ ಬಾರಿಯೂ ಸಂಗೀತ ರಸದೂಟದ ಜೊತೆಗೇ ರಸಗವಳವನ್ನೂ ವಿದ್ವಾನ್ ಆರ್.ಕೆ.ಪದ್ಮನಾಭ ವ್ಯವಸ್ಥೆಗೊಳಿಸಿದ್ದಾರೆ.
ಅತಿಥಿ ಸತ್ಕಾರ
ಕುಗ್ರಾಮವಾದರೂ ಯಾವ ಅತಿಥಿ ಮಹಾಶಯರಿಗೂ ಯಾವುದಕ್ಕೂ ಕೊರತೆ ಆಗದಂತೆ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಅಚ್ಚರಿಯೇ. ಗ್ರಾಮದ ತುಂಬೆಲ್ಲಾ ಯಾರು ಯಾರ ಮನೆಗೆ ತೆರಳಿದರೂ ಅತಿಥಿ ಆತಿಥ್ಯ ಈ ಗ್ರಾಮದ ಜನರ ಔದಾರ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಸಂಗೀತೋತ್ಸವಕ್ಕೆ ಬಂದ ಅತಿಥಿಗಳೆಲ್ಲರಿಗೂ ಆ ಗ್ರಾಮದ ಮನೆಗಳಲ್ಲೇ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.
ಮೂಲ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಗ್ರಾಮ
ರಾಮನಾಥಪುರ: ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಕುಡಿಯುವ ನೀರಿಲ್ಲದೇ ನಾಗರಿಕರು ಪರದಾಡುವಂತಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ 3 ದಿನಗಳ ಕಾಲ ಸಂಗೀತೋತ್ಸವ ಹಾಗೂ ಗ್ರಾಮದಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ. ಇಲ್ಲಿರುವ ಜನರಿಗೇ ಕುಡಿಯುವ ನೀರಿಗೆ ಹಾಹಾಕಾರ ಬಂದಿದೆ. ಈಗ ಇಲ್ಲಿಗೆ ದೇಶದ ಹಲವು ಗಣ್ಯರು, ಸಂಗೀತಾಸಕ್ತರು ಬರುತ್ತಿದ್ದಾರೆ. ಸಂಗೀತ ಗ್ರಾಮವೆಂದೇ ಪ್ರಸಿದ್ದಿಗೆ ಪಾತ್ರವಾಗಿರುವ ಸಂಗೀತಗ್ರಾಮ ರುದ್ರಪಟ್ಟಣದಲ್ಲೀಗ ಸಮಸ್ಯೆ ಬಿಟ್ಟು ಬೇರೇನೂ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ.
ರುದ್ರಪಟ್ಟಣದ ಪಕ್ಕದಲ್ಲೇ ಕಾವೇರಿ ನದಿ ಹರಿದರೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗೆ ಬರ ಬಂದಿದೆ. ಶುದ್ದ ನೀರಿನ ಸೌಲಭ್ಯವಿಲ್ಲ. ಇಲ್ಲಿಯ ರಸ್ತೆಯ ದೀಪಗಳ ವಿದ್ಯುತ್ ಸಮಸ್ಯೆ ನಿವಾರಣೆಯಾಗಿಲ್ಲ. ಇಲ್ಲಿಗೆ ಬರಲು ಸರಿಯಾದ ರಸ್ತೆಗಳಿಲ್ಲ. ಗ್ರಾಮದ ಮೂಲ ಸೌಲಭ್ಯ ಕಲ್ಪಿಸುವ ಕಡೆಗೆ ಇಲ್ಲಿಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಸಿದೆ ಎಂದು ದೂರಿದ್ದಾರೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದ್ದು ರೋಗಿಗಳಿಗೆ ಅನಾನುಕೂಲವಾಗಿದೆ. ಸಾರ್ವಜನಿಕ ಶೌಚೌಲಯ ಬೇಡಿಕೆ ಇನ್ನೂ ಗ್ರಾ.ಪಂ. ಧಿಕಾರಿಗಳ ಕಿವಿಗೆ ಬಿದ್ದಿಲ್ಲ. ಸುಮಾರು 5 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯವಿಲ್ಲ. ಪ್ರವಾಸಿಗರು ಉಳಿದುಕೊಳ್ಳಲು ವಸತಿ ಯಾತ್ರಿನಿವಾಸ ಸೌಲಭ್ಯವಿಲ್ಲದೇ ಪೇಚಿಗೆ ಸಿಲುಕುವಂತಾಗಿದೆ. ಈವರೆಗೂ ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳು ಗ್ರಾಮದ ಅಭಿವ್ರದ್ದಿಗೆ ಶ್ರಮ ವಹಿಸಬೇಕಾಗಿದೆ.