'ಹನಿ ನೀರಾವರಿಯಿಂದ ನೀರು ಪೋಲು ತಡೆಗಟ್ಟಲು ಸಾಧ್ಯ'
ಚನ್ನರಾಯಪಟ್ಟಣ: ರೈತರು ತಮ್ಮ ಜಮೀನಿನಲ್ಲಿ ನೀರು ಪೋಲು ಮಾಡದೆ ಅಗತ್ಯತೆಗೆ ತಕ್ಕಂತೆ ನೀರನ್ನು ಬಳಕೆ ಮಾಡಿ ಅಂತರ್ಜಲ ಉಳಿಸುವತ್ತ ಮುಂದಾಗಬೇಕು ಎಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು.
ತೋಟಗಾರಿಕಾ ಇಲಾಖೆ ವತಿಯಿಂದ ರೈತರು ಖರೀದಿಸಿದ ಟ್ರ್ಯಾಕ್ಟರ್ಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು, ರೈತರು ತಮ್ಮ ಬೆಳಗಳಿಗೆ ಅಗತ್ಯತೆಗೆ ತಕ್ಕಂತೆ ನೀರು ಬಳಕೆ ಮಾಡಲು ಹನಿ ನೀರಾವರಿ ಪದ್ದತಿಯಿಂದ ಮಾತ್ರ ಸಾಧ್ಯವಾಗಿದ್ದು, ಈ ವಿಧಾನವನ್ನು ಅಳವಡಿಸಿಕೊಂಡು ನೀರನ್ನು ಉಳಿತಾಯ ಮಾಡುವತ್ತಾ ಗಮನವರಿಸಬೇಕು ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಹನಿ ನೀರಾವರಿಗೆ ನೀಡುತ್ತಿರುವ ಸಹಾಧನದ ಹಣವನ್ನು ಹೆಚ್ಚಿಸಬೇಕೆಂದು ಒತ್ತಾಯ ತರುತ್ತಿದ್ದು, ಈ ಬಗ್ಗೆ ತೋಟಗಾರಿಕಾ ನಿರ್ದೇಶಕರ ಜತೆ ಚರ್ಚಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಸತತ ಬರಗಾಲ ತಲೆದೋರಿದ್ದು, ತೆಂಗು ಒಣಗುತ್ತಿರುವ ಜತೆಗೆ ರೋಗಗಳಿಗೆ ತುತ್ತಾಗುತ್ತಿರುವುದರಿಂದ ತೆಂಗು ಬೆಳೆಯ ಬದಲಾಗಿ ದಾಳಿಂಬೆ, ಮಾವು ಸಪೋಟ ಬೆಳೆಯಲು ಮುಂದಾಗಬೇಕು ಎಂದು ತಿಳಿಸಿದರು.
ತಾ. ಪಂ. ಮಾಜಿ ಸದಸ್ಯ ಬೆಳಗೀಹಳ್ಳಿ ಪುಟ್ಟಸ್ವಾಮಿ, ತಾಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಇದ್ದರು.