ಅಕ್ರಮ ಮರಳು ಸಾಗಣೆ ವಿರುದ್ಧ ತಹಸೀಲ್ದಾರ್ ಅಸಮಾಧಾನ
ಹೊಳೆನರಸೀಪುರ : ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಆಕ್ರಮ ಮರಳು ಸಾಗಣೆಯ ವಿರುದ್ಧ ಇಲ್ಲಿನ ತಹಸೀಲ್ದಾರ್ ಎಸ್.ರಾಘವೇಂದ್ರ ತಿರುಗಿ ಬಿದ್ದಿರುವುದಲ್ಲದೇ, ಆಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ ಎಂದು ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆಸಲಾದ ತುರ್ತು ಸಭೆಯಲ್ಲಿ ಖುದ್ದು ತಹಸೀಲ್ದಾರ್ ಅವರೇ ತಮ್ಮ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.
ಈ ಕುರಿತಂತೆ ತಾಲೂಕಿನಲ್ಲಿನ ಆಕ್ರಮ ಮರಳು ಸಾಗಣೆ ತಡೆಗಟ್ಟುವ ಕುರಿತಂತೆ ಸಂಬಂಧಿಸಿದ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದ ಅವರು, ತಾಲೂಕಿನ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಣೆಯಿಂದ ಮರಳಿನ ನಿಕ್ಷೇಪ ಸಂಪೂರ್ಣ ತಳ ಮುಟ್ಟಿದ್ದು, ಇದನ್ನು ತಡೆಗಟ್ಟಲು ನೇಮಕ ಮಾಡಿರುವ ಅಧಿಕಾರಿಗಳ ತಂಡ ವಿಫಲವಾಗಿದೆ ಎಂದು ತಹಸೀಲ್ದಾರ್ ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.
ಪ್ರಸ್ತುತ ಹೇಮಾವತಿ ನದಿ ದಂಡೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಗಟ್ಟಬೇಕಾದರೆ ಗ್ರಾಮಲೆಕ್ಕಿಗರು ಮತ್ತು ಅಭಿವೃದ್ದಿ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕ ಸೇತುವೆ ಆಗಬೇಕು, ಆಗ ಮಾತ್ರ ನದಿಯಲ್ಲಿ ಇರುವ ಅಲ್ಪಸ್ವಲ್ಪ ಮರಳನ್ನು ರಕ್ಷಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ತಡೆಗಟ್ಟಲು ಎಲ್ಲ ಅಧಿಕಾರಿಗಳು ಒಂದಾಗಿ ಕೆಲಸ ನಿರ್ವಹಿಸಬೇಕೆಂಬ ಒಮ್ಮತದ ಮಾತುಗಳು ಸಭೆಯಲ್ಲಿ ಕೇಳಿಬಂದವು.
ತಾಪಂ ಇಒ ತಮ್ಮಣ್ಣಗೌಡ ಮಾತನಾಡಿ, ನದಿಯಿಂದ ಮರಳು ತೆಗೆಯುತ್ತಿರುವ ಕಬ್ಬಿಣದ ಬೋಟ್ಗಳನ್ನು ಯಾವ ಮುಲಾಜೂ ಇಲ್ಲದೆ ವಶಕ್ಕೆ ಪಡೆಯಲು ಮುಂದಾಗಬೇಕು, ಹಾಗೂ ವಶಪಡಿಸಿಕೊಂಡ ಕಬ್ಬಿಣದ ದೋಣಿಗಳನ್ನು ಸಾಗಿಸಲು ವಾಹನವನ್ನು ಒದಗಿಸಿದಲ್ಲಿ ಆಕ್ರಮವಾಗಿ ನದಿಯಿಂದ ಮರಳು ತೆಗೆಯುವುದನ್ನು ತಡೆಗಟ್ಟಲು ಸಾದ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಹಾಜರಿದ್ದ ಅಭಿವೃದ್ದಿ ಅಧಿಕಾರಿಗಳು ಮತ್ತು ಗ್ರಾಮಲೆಕ್ಕಿಗರು ತಹಸೀಲ್ದಾರ್ ಅವರ ಮನವಿ ಆಲಿಸಿದ್ದನ್ನು ಬಿಟ್ಟರೆ ತಾವುಗಳು ಯಾವುದೇ ಸಲಹೆ ಸೂಚನೆ ನೀಡದೆ ಸುಮ್ಮನೆ ಕುಳಿತಿದ್ದನ್ನು ಗಮನಿಸಿದರೆ ಇಡೀ ಸಿಬ್ಬಂದಿ ಹಾಗು ಅಧಿಕಾರಿಗಳಿಗೆ ತಾಲೂಕಿನ ಅಕ್ರಮ ಮರಳು ಮಾಫಿಯಾ ದಂಧೆಕೋರರ ಭಯದ ನೆರಳು ಕಾಡುತ್ತಿದೆ ಎಂಬಂತೆ ಪ್ರತಿಬಿಂಬಿತವಾಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ಅಕ್ರಮ ಮರಳು ಸಾಗಣೆ ವಿಚಾರದಲ್ಲಿ ತಾಲೂಕಿನಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್ಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಟಾಸ್ಕ್ ಪೋರ್ಸ್ ಅಧಿಕಾರಿಗಳಾದ ವಲಯ ಅರಣ್ಯಾಧಿಕಾರಿ ಪಿ.ಸಿ.ರವೀಂದ್ರ, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ನರೇಂದ್ರ, ತಾಲೂಕು ಪಂಚಾಯಿತಿ ಅಧಿಕಾರಿ ತಮ್ಮಣ್ಣಗೌಡ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.