ರುದ್ರಪಟ್ಟಣ: ಎಲ್ಲೆಲ್ಲೂ ಸಂಗೀತವೇ...
ಅರಕಲಗೂಡು: ಹೌದು, ಎಲ್ಲಿ ನೋಡಿದರೂ ಸಂಗೀತಮಯ, ಎಲ್ಲ ಕಡೆಯೂ ಸಂಗೀತ ಗುಯ್ಗುಡುವ ನಾದ ಸ್ವರ ಆಲಾಪಗಳ ಝೇಂಕಾರ.ಈ ನಡುವೆ ಸಂಗೀತದ ಲೇಪವೇ ತಿಳಿಯದ ವ್ಯಕ್ತಿಯೂ ಗುಂಯ್ಗುಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಂತಹ ವಾತಾವರಣ ಇದ್ದುದು, ಕರ್ನಾಟಕದ ತಿರುವಯ್ಯಾರ್ ಎಂದೇ ಖ್ಯಾತಿ ಹೊಂದಿರುವ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ. ಮೂರು ದಿನಗಳ 13ನೇ ಸಂಗೀತೋತ್ಸವ ಸಂದರ್ಭದಲ್ಲಿ ಎರಡನೇ ದಿನವಾದ ಶನಿವಾರ ಬೆಳಗ್ಗೆ 6.30ಕ್ಕೆ ಕಾವೇರಿ ನದಿಗೆ ತೆರಳಿದ ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತು ಇತರ ರುದ್ರಪಟ್ಟಣದ ಮೂಲದವರೇ ಆಗಿ ಹೊರ ಊರುಗಳಲ್ಲಿ ನೆಲಸಿರುವ ಅನಿವಾಸಿ ಗ್ರಾಮಸ್ಥರು ಕಾವೇರಿ ನದಿಗೆ ತೆರಳಿ ಪೂಜೆ ಸಲ್ಲಿಸಿದರು.
ತುಸು ವಿರಾಮದ ನಂತರ ಸಂಗೀತದ ಗಟ್ಟಿನಾದ ಆರಂಭಗೊಂಡಿತ್ತು. ಬೆಳಗ್ಗೆ 10.15ಕ್ಕೆ ಸರಿಯಾಗಿ ಸಂಗೀತ ಮಂಟಪದಲ್ಲಿ ಯುಗಳ ವೈಲಿನ್ ವಾದನ ಆರಂಭಗೊಂಡಿತು. ವಿದ್ವಾನ್ ಎಚ್.ಎಂ. ಸ್ಮಿತಾ ಮತ್ತು ವಿದ್ವಾನ್ ಎಚ್.ಎಂ. ಸಿಂಧು, ಯುಗಳ ವೈಲಿನ್ ವಾದನ ನುಡಿಸಿದರೆ, ವಿದ್ವಾನ್ ತುಮಕೂರು ಬಿ.ರವಿಶಂಕರ್, ವಿದ್ವಾನ್ ತುಮಕೂರು ಬಿ.ಶಶಿಶೇಖರ್ ಕ್ರಮವಾಗಿ ಮೃದಂಗ ಮತ್ತು ಘಟ ನುಡಿಸಿದರು.
ವಿದ್ವಾನ್ ಎಸ್.ಸೌಮ್ಯ ಶರ್ಮಾ, ವಿದ್ವಾನ್ ಆರ್.ಕೆ.ಪ್ರಸನ್ನ ಕುಮಾರ್, ವಿದ್ವಾನ್ ವಾನರಾಸಿ ಬಾಲಕೃಷ್ಣ ಭಾಗವತರ್, ವಿದ್ವಾನ್‌ಬಳ್ಳಾರಿ ಎಂ.ರಾಘವೇಂದ್ರ ಇತರ ಪ್ರಸಿದ್ದ ಪಕ್ಕವಾದ್ಯ ವಿದ್ವಾಂಸರೊಂದಿಗೆ ಹಾಡಿ ಸಂಗೀತೋತ್ಸವಕ್ಕೆ ಮೆರಗು ತಂದರು. ವಿದ್ವಾನ್ ಚಂದನ್‌ಕುಮಾರ್ ಅವರ ಕೊಳಲು ವಾದನ, ವಿದ್ವಾನ್ ನಳಿನಾ ಮೋಹನ್ ಪಿಟೀಲು, ವಿದ್ವಾನ್ ಎ.ರೇಣುಕಾ ಪ್ರಸಾದ್ ಮೃದಂಗ, ವಿದ್ವಾನ್ ಎ.ಎಸ್.ಎನ್. ಸ್ವಾಮಿ-ಖಂಜರಿ ನುಡಿಸಿ ಗೋಷ್ಠಿಗೆ ಮೆರಗು ತಂದರು. ಹೀಗೆ ಐದು ಸಂಗೀತ ವಿದ್ವಾಂಸರ ತಂಡಗಳು ಬೆಳಗಿನಿಂದ ಸಂಜೆಯವರೆಗೂ ಪ್ರತಿ ಗಂಟೆಗೊಂದು ತಂಡದಂತೆ ಸಂಗೀತ ಗಾಯನ ನಡೆಸಿಕೊಟ್ಟು, ವೇದಿಕೆಯ ಎದುರಿಗಿದ್ದ ಪ್ರೇಕ್ಷಕರು ತಲೆ ತೂಗುವಂತೆ ಮಾಡಿದರು.
ಅ.ರಾ.ಸುಬ್ಬರಾವ್.