'ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ'
ಹಾಸನ: ಪ್ರತಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ನಗರದ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದು ಪರಿಪಾಠವಾಗಿದೆ. ಸಂಪ್ರದಾಯದಂತೆ ಈ ವರ್ಷವೂ ಚಾಚೂ ತಪ್ಪದೆ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಿ ತನ್ನ ಜವಾಬ್ದ್ದಾರಿ ಮುಗಿಸಿಕೊಂಡಿದೆ ಎಂದು ಶಿಕ್ಷಣ ಹಕ್ಕು ಸಮಿತಿ ಅಧ್ಯಕ್ಷ ಬಿ.ಜಿ.ಗೋಪಾಲ ಆರೋಪಿಸಿದ್ದಾರೆ.
ಅನಧಿಕೃತ ಶಾಲೆಗಳಿಂದ ಬೇಸತ್ತು ಸಾರ್ವಜನಿಕರು ದಾಳಿ ನಡೆಸಿದರೆ, ಅವರ ಮೇಲೆ ಮೊಕದ್ದಮೆ ಹೂಡಿ. ಮುಂದೆಂದೂ ಜೀವನದಲ್ಲಿ ಇಂತಹ ಜನಪರ ಕಾಳಜಿ ವಹಿಸದಂತೆ ವಿಮುಖರಾಗುವಂತೆ ಮಾಡಲಾಗುತ್ತದೆ. ಆದರೆ, ಕೆಲ ದಶಕಗಳಿಂದ ಅನಧಿತವಾಗಿ ಶಾಲೆಗಳನ್ನು ನಡೆಸುತ್ತಾ ನೂರಾರು ಮಕ್ಕಳ ಭವಿಷ್ಯದಲ್ಲಿ ಚಲ್ಲಾಟವಾಡುವವರ ವಿರುದ್ದ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದೆ, ಅನಧಿಕೃತ ಶಾಲೆಗಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳುವುದರ ಬದಲು. ಮಕ್ಕಳ ಭವಿಷ್ಯ ಹಾಳಾಗದಂತೆ ಕಾನೂನು ಪ್ರಕಾರ ಕ್ರಮ ಬದ್ದಗೊಳಿಸಬೇಕು.
ಅನಧಿಕೃತ ಶಾಲೆಗಳನ್ನು ಅಧಿಕೃತ ಶಾಲೆಗಳನ್ನಾಗಿ ಪರಿವರ್ತಿಸಬಹುದೇ, ಸಾಧ್ಯವಾಗದಿದ್ದಲ್ಲಿ ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಿ ಅನಧಿಕೃತ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಬೇಕು. ಈ ಸಂಭವನೀಯತೆಗಳನ್ನು ತಿರಸ್ಕರಿಸಿ ಮುಂದುವರಿಸಿದ ಶಾಲೆಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬ ನಾಣ್ನುಡಿಯನ್ನು ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ಬದಲಾಯಿಸಿದ ಇಲಾಖೆ. ಮಕ್ಕಳ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸಿಬೇಕು ಎಂದು ಒತ್ತಾಯಿಸಿದ್ದಾರೆ.