ಎತ್ತಿನಹೊಳೆ ತಿರುವು ಯೋಜನೆ ಸಾಧಕ-ಬಾಧಕ ಚರ್ಚೆ ಇಂದು
ಹಾಸನ: ಸಕಲೇಶಪುರ ತಾಲೂಕಿನ ಹಿರದನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ತಿರುವು ಯೋಜನೆ ಸಾಧಕ-ಬಾಧಕ ವಿಚಾರ ವಿನಿಮಯ ಸಭೆಯನ್ನು ಮೇ 26 ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಎ. ಕಿಶೋರ್‌ಕುಮಾರ್ ತಿಳಿಸಿದ್ದಾರೆ.
ಯೋಜನೆಯಿಂದ ಬಾಧಿತರಾಗಬಹುದಾದ ಹಿರದನಹಳ್ಳಿ, ಮೊಗನಹಳ್ಳಿ, ಹೊಸಹಳ್ಳಿ, ಆಲುವಳ್ಳಿ, ಕಡಗರವಳ್ಳಿ, ಹೊಂಗಡಹಳ್ಳ ಮುಂತಾದ ಗ್ರಾಮಗಳ ಗ್ರಾಮಸ್ಥರು ಮತ್ತು ಪರಿಸರವಾದಿಗಳು, ಸಾಹಿತಿಗಳು, ಹೋರಾಟಗಾರರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಮುಖವಾಗಿ ಕರ್ನಾಟಕ ಜೈವಿಕ ಇಂಧನ ಮಂಡಳಿಯ ಮಾಜಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ್ ಹೆಗ್‌ಡೆ ಆಶೀಸರ, ಅಂತಾರಾಷ್ಟ್ರೀಯ ಚಿತ್ರಕಲಾವಿದ ದಿನೇಶ್ ಹೊಳ್ಳ, ವಿಜ್ಞಾನ ಕೇಂದ್ರದ ಸಿ. ಯತಿರಾಜು, ಸಾಹಿತಿ ರೂಪ ಹಾಸನ ಮುಂತಾದವರು ಭಾಗವಹಿಸಲಿದ್ದಾರೆ. ನೇತ್ರಾವತಿ ನದಿಯನ್ನು ಆಶ್ರಯಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಹ ಭಾಗವಹಿಸುತ್ತಾರೆ. ಇದೇ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ಕರೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.