ಮಣ್ಣಿನ ಸವಕಳಿ ತಡೆಗೆ ಹನಿ ನೀರಾವರಿಗೆ ಆದ್ಯತೆ ನೀಡಿ
ಹಾಸನ: ಮಣ್ಣು ಮತ್ತು ನೀರಿನ ನಿರ್ವಹಣೆ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಕಾಪಾಡಲು, ಫಲವತ್ತತೆ ಹೆಚ್ಚಿಸಲು ಹಾಗೂ ಮಣ್ಣಿನ ಸವಕಳಿ ತಡೆಗಟ್ಟಲು ತುಂತುರು ನೀರಾವರಿ ಮತ್ತು ಹನಿ ನೀರಾವರಿ ಉಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜು ತಿಳಿಸಿದ್ದಾರೆ.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿಂದು ಇಲಾಖೆಯಿಂದ 2014-15ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಪುರಷ್ಕೃತ ಯೋಜನೆಯ ಬಗ್ಗೆ ಇಲಾಖೆಯ ವಿಸ್ತರಣಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಣ್ಣು ಮತ್ತು ನೀರು ಸಂಗ್ರಹಣೆ ಯೋಜನೆಗೆ ಒತ್ತು ನೀಡಲು ನ್ಯಾಷನಲ್ ಮಿಷನ್ ಅನ್ಸ್‌ಸ್ಟೈನಬಲ್ ಅಗ್ರಿಕಲ್ಚರ್ ಯೋಜನೆಯ ಅನುಷ್ಠಾನಗೊಳಿಸುತ್ತಿರುವುದಾಗಿ ತಿಳಿಸಿದರು.
ಎಣ್ಣೆಕಾಳು ಉತ್ಪಾದನೆ ದ್ವಿಗುಣಗೊಳಿಸಲು ರಾಷ್ಟ್ರೀಯ ಎಣ್ಣೆಕಾಳು ಅಭಿಯಾನ ಯೋಜನೆ ಮೂಲಕ ಅರಿವು ಮೂಡಿಸುವುದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಆತ್ಮ ಯೋಜನೆ ಸೇರಿದಂತೆ ಒಟ್ಟು 7 ಯೋಜನೆಗಳ ಬಗ್ಗೆ ತರಬೇತಿ ಏರ್ಪಡಿಸಿ, ಮಾರ್ಗಸೂಚಿಯ ಬಗ್ಗೆ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ರೈತರಲ್ಲಿಗೆ ಯೋಜನೆಗಳನ್ನು ತೆಗೆದುಕೊಂಡು ಹೋಗಲು ಶ್ರಮಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ರಾಷ್ಟ್ರೀಯ ಬೆಳೆ ವಿಮೆ ಯೋಜನೆಯಡಿ ಮಾರ್ಪಡಿಸಿದ ಬೆಳೆ ವಿಮಾ ಯೋಜನೆಯನ್ನು ತಾಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅನುಷ್ಠಾನ ಮಾಡಲು ಸರ್ಕಾರದ ಆದೇಶ ಹೊರಡಿಸಲಾಗಿದೆ ಎಂದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (ಎನ್‌ಎಫ್‌ಎಸ್‌ಎಂ), ಅಡಿಯಲ್ಲಿ ದ್ವಿದಳ ಧಾನ್ಯ ಬೆಳೆಗಳಲ್ಲಿ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸುವ ಬಗ್ಗೆ ತಿಳಿಸಲಾಯಿತು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಆರ್.ಮುನೇಗೌಡ ಮಾರ್ಗಸೂಚಿಯ ಬಗ್ಗೆ ತರಬೇತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎ.ಎಸ್. ಕೋಕಿಲಾ ವಂದಿಸಿದರು.