ಹಳೇ ದ್ವೇಷ: ಮಹಿಳೆ ಮೇಲೆ ಹಲ್ಲೆ
ಹೊಳೆನರಸೀಪುರ: ಕ್ಷುಲ್ಲಕ ಕಾರಣಕ್ಕೆ ಹಳೆಯ ದ್ವೇಷದಿಂದ ಮಹಿಳೆಯೊಬ್ಬರು ನಡೆಸುತ್ತಿದ್ದ ಐಸ್‌ಕ್ಯಾಂಡಿ ತಯಾರಿಕಾ ಘಟಕವನ್ನು ಧ್ವಂಸಗೊಳಿಸಿ, ಮನೆಯಲ್ಲಿದ್ದ ನಗದನ್ನು ದೋಚಿರುವುದಲ್ಲದೇ, ಮನೆಯೊಡತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಗರಡಿ ಬೀದಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಐಸ್ ಕ್ಯಾಂಡಿ ಮಾಡಿಕೊಂಡು ಜೀವನ ನಡೆಸುತ್ತಿರುವ ಶಾಯಿರಾಖಾನ್ ಅವರ ಮೇಲೆ ಹಾಗು ಘಟಕದ ಮೇಲೆ ಅದೇ ಸಮುದಾಯದ ಕೆಲವರು ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಹಾಗೂ ಮನೆಯಲ್ಲಿದ್ದ ಕಬ್ಬಿಣದ ಬೀರನ್ನು ಒಡೆದು ಹಾಕಿ ಅದರೊಳಗೆ ಇದ್ದ ನಗದು ದೋಚಿ ಪರಾರಿ ಆಗಿದ್ದಾರೆ ಎಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಯಿರಾಖಾನ್ ಪೊಲೀಸರಿಗೆ ದೂರಿದ್ದಾರೆ.
ಘಟನೆ ಬಗ್ಗೆ ವಿವರ ನೀಡಿದ ಶಾಯಿರಾಖಾನ್, ತಮ್ಮ ಮೇಲೆ ಹಲ್ಲೆ ನಡೆಸಿದವರು ಆಖಿಲ್‌ಪಾಷ, ಅಬ್ದುಲ್‌ಕಲೀಂ, ಮುಬಾರಕ್, ಹಸ್ರತ್ ಹುಸೇನ್ ಮತ್ತು ಆಸ್ಪೀಯಾಭಾನು ಶುಕ್ರವಾರ ರಾತ್ರಿ ಗುಂಪು ಕಟ್ಟಿಕೊಂಡು ಬಂದು ತಮ್ಮ ಹಾಗೂ ಮನೆಯ ಮೇಲೆ ದಾಳಿ ನಡೆಸಿದರು ಎಂದು ದೂರಿರುವ ಅವರು, ಇದೇ ರೀತಿ ಹಿಂದಿನ ದಿನ ಗುರುವಾರ ಸಹ ತಮ್ಮ ಘಟಕಕ್ಕೆ ಬಂದು ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಹಾಕಿ ತೆರಳಿದ್ದರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ಹಲ್ಲೆ ನಡೆಸಿದರು ಬಂಧನಕ್ಕೆ ಬಲೆ ಬೀಸಿದ್ದಾರೆ.
ಹೃದಯಾಘಾತದಿಂದ ಶಿಕ್ಷಕ ಸಾವು
ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ದ್ಯಾವನೂರು ಪ್ರಾಥಮಿಕ ಶಾಲೆ ಶಿಕ್ಷಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಾಲೂಕಿನ ಬಾಗೂರು ಹೋಬಳಿ ಬೂವನಹಳ್ಳಿ ಗ್ರಾಮದ ನಿವಾಸಿ ವಿರೂಪಾಕ್ಷ(46) ಮೃತರು. ಇವರು ರಾಜ್ಯ ಸಾರಿಗೆ ಬಸ್‌ನಲ್ಲಿ ನವಿಲೆಯಿಂದ ತಮ್ಮ ಗ್ರಾಮ ಬೂವನಹಳ್ಳಿಗೆ ಆಗಮಿಸುತ್ತಿದ್ದರು. ಅವರು ಇಳಿಯುವ ನಿಲ್ದಾಣ ಬಂದಾಗ ಇವರನ್ನು ಎಚ್ಚರಿಸಿದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ನುಗ್ಗೇಹಳ್ಳಿ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಪತಿಯಿಂದ ಪತ್ನಿ ಕೊಲೆ
ಹಾಸನ: ಪತ್ನಿಯನ್ನು ಪತಿ ಕೊಲೆಗೈದಿರುವ ಘಟನೆ ಬೇಲೂರಿನಲ್ಲಿ ಭಾನುವಾರ ನಡೆದಿದೆ.
ಸಕಲೇಶಪುರ ತಾಲೂಕಿನ ಅವರೇಕಾಡು ಗ್ರಾಮದ ಸವಿತಾ ಮೃತ ದುರ್ದೈವಿ. ಪತಿ ಶ್ರೀಧರ್ ಬೇಲೂರು ಪೊಲೀಸರಿಗೆ ಶರಣಾಗಿದ್ದಾನೆ. ಶ್ರೀಧರ್ ಮತ್ತು ಸವಿತಾರ ವಿವಾಹ 8 ವರ್ಷಗಳ ಹಿಂದೆ ನಡೆದಿದ್ದು, ಈತ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಇದನ್ನು ತಿಳಿದ ಪತ್ನಿ ಸವಿತಾ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಇವರಿಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ, ಶನಿವಾರ ರಾತ್ರಿ ಇವರಿಬ್ಬರ ನಡುವೆ ಜಗಳವಾಗಿದ್ದು, ಶ್ರೀಧರ್ ಸವಿತಾಳನ್ನು ಕಟ್ಟಿ ಹಾಕಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ನಂತರೆ ಆಕೆಯನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸವಿತಾ ಮೃತಪಟ್ಟಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.