ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇನ್ನಾರು ತಿಂಗಳಲ್ಲಿ ಸರ್ವೆ ಕಾರ್ಯಾರಂಭ

Mainashree
Updated On : 27 May 2014, 9:29 am

ಸಕಲೇಶಪುರ: ಒತ್ತುವರಿ ತೆರವು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇನ್ನಾರು ತಿಂಗಳಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ವಿಂಗಡಣೆ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಕಾಫಿ ಬೆಳೆಗಾರರ ಸಮ್ಮೇಳನ ಹಾಗೂ ಕೃಷಿ ವಸ್ತು ಪ್ರದರ್ಶವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಪ್ರಿಂ ಕೋರ್ಟ್ ಆದೇಶದಂತೆ ಒತ್ತುವರಿ ತೆರವುಗೂಳಿಸುವುದು ಅನಿವಾರ್ಯವಾಗಿದೆ. ಆದರೆ, ರೈತರ ಹಿತದೃಷ್ಟಿಯಿಂದ ನ್ಯಾಯಾಲಯಕ್ಕೆ ರಾಜ್ಯ ಸರಕಾರ ಮನವಿ ಮಾಡುವ ಮೂಲಕ ಇನ್ನು ಆರು ತಿಂಗಳಿನಲ್ಲಿ ಕಂದಾಯ ಹಾಗೂ ಅರಣ್ಯ ಭೂಮಿ ವಿಂಗಡಣೆ ಕಾರ್ಯ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ 33 ತಾಲೂಕುಗಳ 20 ಸಾವಿರ ಚದರ ಕಿಮಿ ಅರಣ್ಯ ವ್ಯಾಪ್ತಿಯಲ್ಲಿ ಇದ್ದು ರೈತರ ಹಿತದೃಷ್ಟಿಯಿಂದ ಇದನ್ನು 9 ಸಾವಿರ ಚದರ ಕಿಮಿಗೆ ಇಳಿಸಲಾಗಿದೆ. ಕಸ್ತೂರಿರಂಗನ್ ವರದಿ ಜಾರಿಗೂ ಮುನ್ನ ಪ್ರಮುಖ ಸಂಘಟನೆಗಳೊಂದಿಗೆ ಚರ್ಚಿಸಿ ಜನಸಾಮಾನ್ಯರ ಬದುಕಿಗೆ ತೊಂದರೆಯಾಗದಂತೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ವ್ಯಾಖ್ಯಾನಿಸಿದರು.
ಇದಲ್ಲದೆ, ಅರಣ್ಯ ಹಕ್ಕು ಕಾಯ್ದೆಯಡಿ ಜನ ಸಾಮಾನ್ಯರ ಹಿತಕಾಯಲು ಸರ್ಕಾರ ಸಿದ್ಧವಿದ್ದು, ಹಲವು ದಶಕಗಳಿಂದ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಜನರಿಗೆ ತೊಂದರೆ ತಪ್ಪಿಸಲು ಹೊಸದಾಗಿ ಅರ್ಜಿ ಪಡೆಯಲು ಸರಕಾರದ ಮುಂದಾಗಿದೆ ಎಂದರು. ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಾದರೆ ಜನ ಸಾಮಾನ್ಯರಿಗೆ ಉಳಿಗಾಲವಿಲ್ಲ. ಆದ್ದರಿಂದ, ಮಲೆನಾಡ ಭಾಗದ ಶಾಸಕರು ಒಗ್ಗೂಡಿ ವಿಧಾನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿಯಲ್ಲಿನ ಅಂಶಗಳನ್ನು ಪುನಪ್ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗುವುದು ಎಂದರು.
ತಾಲೂಕಿನ ರೈತರ ನೆಮ್ಮದಿಯ ಜೀವನಕ್ಕೆ ಆನೆ ಕಾರಿಡಾರ್ ಯೋಜನೆ ಅಗತ್ಯವಿದ್ದು, ಜನರೇ ಸ್ವಯಂ ಪ್ರೇರಿತರಾಗಿ 2000 ಸಾವಿರ ಎಕರೆ ಜಮೀನು ಬಿಟ್ಟುಕೊಡಲು ಸಿದ್ಧರಿದ್ದಾರೆ. ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಕಾಫಿ ಬೋರ್ಡ್ ಅಧ್ಯಕ್ಷ ಜಾವೆದ್ ಆಖ್ತರ್ ಮಾತನಾಡಿದರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಜನರ ಮನ
ಸೆಳೆಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಹಸುಗುವಳ್ಳಿ ಮಹೇಶ್, ಮಹಮ್ಮದ್ ಜಾಫರ್ ಮತ್ತಿತರರನ್ನು ಸನ್ಮಾನಿಸಲಾಯಿತು. ಹಾಸನ ಜಿಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹೀದ್ ಆಲಂ, ಕಾರ್ಯದರ್ಶಿ ಸಿ.ಎಸ್.ಮಹೇಶ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಜೈರಾಂ, ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್, ಮಾಜಿ ಅಧ್ಯಕ್ಷ ಡಾ.ಎನ್.ಕೆ ಪ್ರದೀಪ್, ಜಗನ್ನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement