ಹಾವೇರಿ: ತಾಲೂಕಿನ ಹೊಸರಿತ್ತಿ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಜ. 30 ಹಾಗೂ 31ರಂದು 7ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದ್ದು, ಬಹುತೇಕ ಪೂರ್ಣಗೊಂಡಿವೆ. ಮೂರು ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ವಿಶಾಲ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಸುಂದರ ವೇದಿಕೆಗೆ ಸ್ವಾತಂತ್ರ್ಯಯೋಧ ಗುದ್ಲೆಪ್ಪ ಹಳ್ಳಿಕೇರಿ ಹೆಸರಿಡಲಾಗಿದ್ದು, ವೇದಿಕೆಯ ಎಡಭಾಗದಲ್ಲಿ 10 ಮಳಿಗೆ ನಿರ್ಮಿಸಲಾಗಿದೆ. ಪಕ್ಕದಲ್ಲಿರುವ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಸಭಾಭವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉದ್ಘಾಟನೆ
ಬುಧವಾರ ಬೆಳಗ್ಗೆ 8ಕ್ಕೆ ಧ್ವಜಾರೋಹಣ. 8.30ರಿಂದ ಸಮ್ಮೆಳನದ ಸರ್ವಾಧ್ಯಕ್ಷ ಡಾ ಚಂದ್ರಶೇಖರ ಪಾಟೀಲ ಅವರ ಮೆರವಣಿಗೆ, 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಿಳಾ ಗೋಷ್ಠಿ, 3.30ಕ್ಕೆ ಚಂಪಾ ಗೋಷ್ಠಿ, 5.30ರಿಂದ ಕವಿಗೋಷ್ಠಿ ನಡೆಯಲಿವೆ.