ಹಾವೇರಿ: ಜಿಲ್ಲಾ ಕೇಂದ್ರವಾಗಿ 15 ವರ್ಷ ಕಳೆದರೂ ಟ್ರಾಫಿಕ್ ಪೊಲೀಸ್ ಠಾಣೆ ಇಲ್ಲದ ಜಿಲ್ಲಾ ಕೇಂದ್ರವೆಂದರೆ ಹಾವೇರಿ ಮಾತ್ರವೇ ಇರಬಹುದು. ಇದುವರೆಗೆ ಟ್ರಾಫಿಕ್ ಪೊಲೀಸರು ಇಲ್ಲದ್ದರಿಂದ ಇಲ್ಲಿ ಸಂಚಾರಿ ನಿಯಮಗಳ ಪಾಲನೆಯಾಗುತ್ತಿಲ್ಲ.
ಜಿಲ್ಲಾ ಕೇಂದ್ರಕ್ಕೆ ವಿವಿಧ ಕೆಲಸ ಕಾರ್ಯಗಳಿಗಾಗಿ ನಿತ್ಯ ಸಾವಿರಾರು ಜನ ಬರುತ್ತಾರೆ. ದಿನದಿಂದ ದಿನಕ್ಕೆ ದ್ವಿಚಕ್ರ ಸೇರಿದಂತೆ ಇತರ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ಖಾಸಗಿ ಬಾಡಿಗೆ ವಾಹನಗಳೂ ಹೆಚ್ಚಾಗಿವೆ. ಟಂಟಂ, ಟ್ರಾಕ್ಸ್, ಆಟೋಗಳಿಗೆ ಲೆಕ್ಕವಿಲ್ಲ. ಆದರೆ, ಇಲ್ಲಿ ಸಂಚಾರಿ ನಿಯಮ ಮಾತ್ರ ಸ್ವಲ್ಪವೂ ಪಾಲನೆಯಾಗುತ್ತಿಲ್ಲ. ಯಾಕೆಂದರೆ ಇಲ್ಲಿ ನಿಯಮ ಉಲ್ಲಂಘಿಸಿದವರೂ ಕೇಳುವವರಿಲ್ಲ.
ಸಾರಿಗೆ ನಿಯಮಕ್ಕೆ ಕಿಮ್ಮತ್ತಿಲ್ಲ: ಇಲ್ಲಿಯ ಬಸ್ ನಿಲ್ದಾಣ, ರೇಲ್ವೆ ಸ್ಟೇಶನ್ ರಸ್ತೆ, ಸಿದ್ದಪ್ಪ ಸರ್ಕಲ್, ಸುಭಾಷ ರಸ್ತೆಯಲ್ಲಿ ಸದಾ ಜನಜಂಗುಳಿ ಇರುತ್ತದೆ. ವಾಹನಗಳ ಸಂಚಾರವೂ ಜೋರಾಗಿರುತ್ತದೆ. ಅದರಲ್ಲೂ ಯುವಕರ ಬೈಕ್ ಸವಾರಿ ಹೆದರಿಕೆ ಹುಟ್ಟಿಸುವಂತಿರುತ್ತದೆ. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆ ದಾಟಬೇಕಾದರೆ ಅಂಜಬೇಕು. ಪಾರ್ಕಿಂಗ್ ಸ್ಥಳವೂ ಇಲ್ಲದ್ದರಿಂದ ಎಲ್ಲಿ ನೋಡಿದರೂ ವಾಹನಗಳದ್ದೇ ಕಾರುಬಾರು. ಪಾದಚಾರಿಗಳ ಪಾಡು ಇಲ್ಲಿ ಹೇಳತೀರದು. ಸಿದ್ದಪ್ಪ ಸರ್ಕಲ್, ಬಸ್ ನಿಲ್ದಾಣದ ಸಮೀಪದ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ನಿಂತಿರುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿವೆ. ಅಲ್ಲದೇ ಸಿದ್ದಪ್ಪ ಸರ್ಕಲ್ನಲ್ಲಿ ನಿತ್ಯವೂ ಪ್ರತಿಭಟನೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುವುದು ಮಾಮೂಲಿಯಾಗಿದೆ. ಸಂಚಾರಿ ಪೊಲೀಸ್ ಠಾಣೆ ಇಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದೆ.
ಟ್ರಾಫಿಕ್ ಠಾಣೆ ಬೇಕು: ಜಿಲ್ಲಾ ಕೇಂದ್ರದಲ್ಲಿ ವಾಹನಗಳ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಶೀಘ್ರವಾಗಿ ಟ್ರಾಫಿಕ್ ಠಾಣೆ ಅಗತ್ಯವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮಧ್ಯೆಯೇ ಸಂಚಾರಿ ನಿಯಮ ಪಾಲನೆಗೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಆದರೆ, ಎಲ್ಲ ಸಂದರ್ಭದಲ್ಲೂ ಹಾಗೂ ಪ್ರಮುಖ ಸ್ಥಳಗಳಲ್ಲಿ ಅವರಿಂದಲೇ ಈ ಕಾರ್ಯ ಮಾಡುವುದು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗಣ್ಯ ವ್ಯಕ್ತಿಗಳು ಬರುವಾಗ ಅವರ ಭದ್ರತೆ ಇತ್ಯಾದಿ ಕಾರಣಗಳಿಂದ ರಸ್ತೆ ಪಕ್ಕದಲ್ಲಿ, ಪ್ರಮುಖ ಸರ್ಕಲ್ಗಳಲ್ಲಿ ಪೊಲೀಸರು ಕಾಣುವುದಿಲ್ಲ.
ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಈಗಾಗಲೇ ಟ್ರಾಫಿಕ್ ಠಾಣೆ ನೀಡುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಸರ್ಕಾರ ಇನ್ನೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪಚಾವೋ ಹಾಗೂ ಉತ್ತರ ವಲಯ ಐಜಿಪಿ ಭಾಸ್ಕರರಾವ್ ಅವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ವಿಷಯ ಗಮನಕ್ಕೆ ತಂದಾಗ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತುರ್ತು ಅಗತ್ಯವಿದೆ ಎಂದು ಹೇಳಿದ್ದರು. ಆದರೆ, ಪ್ರಸಕ್ತ ಬಜೆಟ್ನಲ್ಲೂ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿಲ್ಲ.
ಟ್ರಾಫಿಕ್ ಠಾಣೆ ಇಲ್ಲದ್ದರಿಂದ ಜಿಲ್ಲಾ ಕೇಂದ್ರದ ಸಂಚಾರ ವ್ಯವಸ್ಥೆ ಸುಧಾರಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು. ಸ್ಥಳೀಯ ಶಾಸಕರು ಹಾವೇರಿಗೆ ಟ್ರಾಫಿಕ್ ಠಾಣೆ ಮಂಜೂರು ಮಾಡಿಸಿದರೆ ಅದಕ್ಕೆಂದೇ ಪ್ರತ್ಯೇಕ ಪೊಲೀಸ್ ಸಿಬ್ಬಂದಿ ಸಂಚಾರಿ ನಿಯಮ ಪಾಲನೆ ಅನುಷ್ಠಾನಕ್ಕೆ ನಿಯೋಜಿತರಾಗುತ್ತಾರೆ. ಈ ನಿಟ್ಟಿನಲ್ಲಿ ಅವರು ಗಮನ ಹರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ.