ಗೋಣಿಕೊಪ್ಪಲು: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು- ಹರಿಹರ ಸಂಪರ್ಕ ರಸ್ತೆಯನ್ನು ಸುಮಾರು ರು. 223.63 ಲಕ್ಷ ವೆಚ್ಚದಲ್ಲಿ ರಾಜ್ಯ ಸರ್ಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲು ಭಾನುವಾರಂದು ಶಾಸಕ, ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಸುಮಾರು 5.8 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದ್ದು, 32 ಅಡಿ ಅಗಲ ರಸ್ತೆಗೆ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡುವಂತೆಯೂ, ರಸ್ತೆಗೆ ತಾಗಿದಂತಿರುವ ಮರಗಳನ್ನು ತೆರವುಗೊಳಿಸಿಕೊಡುವಂತೆ ಬೋಪಯ್ಯ ಮನವಿ ಮಾಡಿದರು.
ತಾ.ಪಂ. ಅಧ್ಯಕ್ಷ ಅರುಣ್ ಭೀಮಯ್ಯ, ತಾ.ಪಂ. ಉಪಾಧ್ಯಕ್ಷೆ ಊರ್ಮಿಳಾ, ಗ್ರಾಮ ಸಡಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ರೆಡ್ಡಿ, ಜಿ.ಪಂ. ಸದಸ್ಯ ಎಂ.ಎಸ್. ಕುಶಾಲಪ್ಪ, ಗ್ರಾ.ಪಂ. ಸದಸ್ಯ ಮಲ್ಲಂಗಡ ರಾಜ, ಶಾಸಕರ ಆಪ್ತ ಸಹಾಯಕ ಮಲ್ಲಂಡ ಮಧು ದೇವಯ್ಯ ಉಪಸ್ಥಿತರಿದ್ದರು. ಬಿಜೆಪಿ ಪ್ರಮುಖರಾದ ದಿನೇಶ್ ಚಿಟ್ಟಿಯಪ್ಪ ಸ್ವಾಗತಿಸಿದರು.