ಸೋಮವಾರಪೇಟೆ: ಸಮೀಪದ ನೇರುಗಳಲೆ ಗ್ರಾಮದ ಕಾಫಿ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸುಮಾರು ನಾಲ್ಕು ಎಕರೆಯಷ್ಟು ಕಾಫಿ ತೋಟ ಸಂಪೂರ್ಣ ಭಸ್ಮವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ನೇರುಗಳಲೆ ಗ್ರಾಮದ ಎಸ್.ಕೆ. ಉದಯ ಎಂಬವರಿಗೆ ಸೇರಿದ ಕಾಫಿ ತೋಟದ ಮಧ್ಯೆ 4 ಲೈನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಸೋಮವಾರ ಸಂಜೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡು ಇಡೀ ತೋಟಕ್ಕೆ ಬೆಂಕಿ ವ್ಯಾಪಿಸಿದೆ. ಬಿಸಿಲಿನ ಬೇಗೆಯಿಂದ ಸಂಪೂರ್ಣ ಒಣಗಿದ್ದ ತರಗೆಲೆಗಳಿಗೆ ಬೆಂಕಿ ಬಿದ್ದಾಕ್ಷಣ ಕ್ಷಣ ಮಾತ್ರದಲ್ಲಿ ಇಡೀ ತೋಟವನ್ನು ಆವರಿಸಿದ್ದು, ತೋಟದಲ್ಲಿದ್ದ ಕಾಫಿ ಗಿಡಗಳು, ಫಸಲು ತುಂಬಿದ್ದ ಕರಿಮೆಣಸು, ಬಾಳೆ, ಸಿಲ್ವರ್, ಲಿಂಬೆ ಗಿಡಗಳು ಸಂಪೂರ್ಣ ನಾಶವಾಗಿವೆ.
ಮಂಗಳವಾರ ಬೆಳಗ್ಗೆ ವಿದ್ಯುತ್ ಇಲಾಖೆ ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸುಮಾರು ರು. ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಫಸಲು ನಷ್ಟವಾಗಿರುವ ಬಗ್ಗೆ ವರದಿ ನೀಡಿದ್ದಾರೆ.