ಮಡಿಕೇರಿ: ಕಾರ್ಗಿಲ್ ವಿಜಯ್ ದಿವಸವನ್ನು ಶುಕ್ರವಾರ ಮಡಿಕೇರಿ ನಗರದ ಯುದ್ಧ ಸ್ಮಾರಕದ ಮುಂದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು ಕೊಡಗು ಗೌಡ ಪ್ರಗತಿಪರ ಸಂಘದಿಂದ ಅರ್ಥಪೂರ್ಣವಾಗಿ ನಡೆಸಲಾಯಿತು.
ನಗರದ ಮುಖ್ಯ ರಸ್ತೆಯ ಎರಡನೇ ಯುದ್ಧದ ಸ್ಮರಣಾರ್ಥ ನಿರ್ಮಿಸಿರುವ ಯುದ್ಧ ಸ್ಮಾರಕದ ಎದುರು ಎರಡು ಸಂಘಟನೆಯ ಕಾರ್ಯಕರ್ತರು ಪುಷ್ಪ ಅರ್ಪಿಸಿ, ಮೌನ ಆಚರಣೆ ನಡೆಸಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಎಬಿವಿಪಿಯ ವಿನಯ್, ಧನಂಜಯ್, ಶಿವರಾಜ್, ರೋಷನ್, ಪುಳಕಿತ್, ಅಜಿತ್ ಮತ್ತಿತರರು ಭಾಗವಹಿಸಿದ್ದರು. ಕೊಡಗು ಗೌಡ ಪ್ರಗತಿಪರ ಸಂಘದ ಅಧ್ಯಕ್ಷ ಕೊತ್ತೋಳಿ ಅಪ್ಪಯ್ಯ, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ಸೇನೆಯಿಂದ ಪ್ರಸ್ತುತ ನಿವೃತ್ತರಾಗಿರುವ ಪ್ರಕಾಶ್ ಮತ್ತು ಟಿ. ಕಾಳಪ್ಪ ಇನ್ನಿತರ ಪದಾಧಿಕಾರಿಗಳು, ದೇಶ ಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಓಂಕಾರೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಹೊಳ್ಳ ಭಾಗವಹಿಸಿದ್ದರು.
ಕುಶಾಲನಗರ: ಶತ್ರು ರಾಷ್ಟ್ರದಿಂದ ದೇಶವನ್ನು ರಕ್ಷಿಸಿದ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿ ಕುಶಾಲನಗರದಲ್ಲಿ ಶುಕ್ರವಾರ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಗಿಲ್ ವಿಜಯೋತ್ಸವ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಿದರು. ಸ್ಥಳೀಯ ಗಣಪತಿ ದೇವಾಲಯ ಮುಂಭಾಗ ಸೇರಿದ ಸಂಘಟನೆಗಳ ಕಾರ್ಯಕರ್ತರು ದೇಶವಿದ್ರೋಹಿ ಶಕ್ತಿಗಳ ಧಮನಕ್ಕೆ ಹೋರಾಡಿ ತ್ಯಾಗ ಮಾಡಿದ ಕಾರ್ಗಿಲ್ ಯೋಧರ ಕುಟುಂಬ ಸದಸ್ಯರಿಗೆ ಸಾಂತ್ವನ ಕೋರಿದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆ ಸೇರಿ ದೇಶ ಸೇವೆಗೆ ಪಣತೊಟ್ಟು ಸೇನೆ ಸೇರ್ಪಡೆಗೊಳ್ಳುವಂತೆ ಪ್ರಮುಖರು ಕರೆ ನೀಡಿದರು.
ದೇಶದ ಗಡಿ ರಕ್ಷಣೆಗಾಗಿ ದೇಶದ ಹಾಗು ರಾಜ್ಯದ ಯೋಧರನ್ನು ನೆನಪಿಸಿಕೊಳ್ಳುವ ದಿನದ ಅಂಗವಾಗಿ ಶುಕ್ರವಾರ ಕುಶಾಲನಗರದಲ್ಲಿ ಕಾರ್ಗಿಲ್ ವಿಜಯೋತ್ಸವ ನಡೆಯಿತು. ದುಷ್ಟ ವಿನಾಶ, ಸಜ್ಜನರ ಜಯ ಎಂಬ ಪರಿಕಲ್ಪನೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶ ರಕ್ಷಿಸಿ ಪ್ರಾಣತೆತ್ತ ಸೇನಾಯೋಧರಿಗೆ ನಮನ ಸಲ್ಲಿಸಲಾಯಿತು.
ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ನಿವೃತ್ತ ಕ್ಯಾಪ್ಟನ್ ಭಾಸ್ಕರ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಯೋಧರ ಕುಟುಂಬ ಸದಸ್ಯರ ಆರ್ಥಿಕ ಸ್ಥಿತಿ ಹದಗೆಡುವುದರೊಂದಿಗೆ ಹಲವು ಕಡೆ ಅನಾಥಸ್ಥಿತಿ ನಿರ್ಮಾಣಗೊಂಡಿದೆ. ಈ ಬಗ್ಗೆ ಸರ್ಕಾರ ಸಹಾಯಕ್ಕೆ ಬರಬೇಕಾಗಿದೆ ಎಂದರಲ್ಲದೆ, ಯುವ ಪೀಳಿಗೆ ದೇಶಸೇವೆಗೆ ಪಣತೊಟ್ಟು ಸೇನೆಗೆ ಸೇರಲು ಮುಂದಾಗಬೇಕು ಎಂದು ತಿಳಿಸಿದರು.
ಸ್ಥಳೀಯ ಪ್ರಮುಖರಾದ ಜಿ.ಎಲ್. ನಾಗರಾಜ್ ಈ ಸಂದರ್ಭ ಮಾತನಾಡಿ, ಅನನುಕೂಲ ವಾತಾವರಣದಲ್ಲಿ ದೇಶದ ಗಡಿ ರಕ್ಷಣೆಗಾಗಿ ಹೋರಾಡಿ ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಿರುವ ಯೋಧರಿಗೆ ನಮನ ಸಲ್ಲಿಸಿದರು.
ಈ ಸಂದರ್ಭ ಸಂಘ ಸಂಸ್ಥೆಗಳ ಪ್ರಮುಖರಾದ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಪಿ.ಕೆ. ಜಗದೀಶ್, ಲಕ್ಷ್ಮಿನಾರಾಯಣ್, ನವನೀತ್ ಮತ್ತಿತರರು ಇದ್ದರು.