ಗೋಣಿಕೊಪ್ಪಲು: ಕೊಡಗಿನಲ್ಲಿ ಹಲಸಿನ ಹಣ್ಣು ಕಡಿದು ಬಿಸಾಡುವುದು, ಜಾನುವಾರುಗಳಿಗೆ ನೀಡುವುದನ್ನು ಮಾಡಲಾಗುತ್ತಿದೆ. ಆದರೆ, ಹಲಸಿನ ವಿವಿಧ ಉತ್ಪನ್ನಗಳನ್ನು ಸಂಸ್ಕರಿಸಿ, ವಿದೇಶಗಳಿಗೂ ರಪ್ತು ಮಾಡಲು ವಿಫುಲ ಅವಕಾಶಗಳಿವೆ ಎಂದು ಮಡಿಕೇರಿ ಆಕಾಶವಾಣಿ ನಿಲಯ ನಿರ್ದೇಶಕಿ ಇಂದಿರಾ ಗಜರಾಜ್ ಹೇಳಿದ್ದಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಕೈಗೊಳ್ಳಲಾಗಿರುವ ತಂತ್ರಜ್ಞಾನ, ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ನೋಂದಣಿ ಕುರಿತು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರಗಳು ಇಲ್ಲಿನ ರೈತಾಪಿ ವರ್ಗಕ್ಕೆ, ಸ್ವಸಹಾಯ ಸಂಘಗಳಿಗೆ, ಮಹಿಳೆಯರಿಗೆ ಉಪಯುಕ್ತ ತರಬೇತಿ ನೀಡುತ್ತ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಪತ್ರಕತ್ರರ ಸಂಘದ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ, ಮಾಧ್ಯಮಗಳು ಕೆವಿಕೆಯ ಕಾರ್ಯಕ್ರಮದ ಬಗ್ಗೆ ಹೆಚ್ಚು ಕಾಳಜಿಯಿಂದ ರೈತರ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲು ಪ್ರೆಸ್‌ಕ್ಲಬ್ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಮಾತನಾಡಿ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರವು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು, ರೈತರ ಪಾಲ್ಗೊಳ್ಳುವಿಕೆ ಕೊರತೆ ಎದ್ದು ಕಾಣುತ್ತಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ನಿರ್ದೇಶಕ ಪಿ.ಸಿ. ತ್ರಿಪಾಠಿ, ಮನೆಯಲ್ಲಿ ಹಣ್ಣು ಕೆಡದಂತೆ ಇಡುವ ವಿಧಾನ, ವಿವಿಧ ಲಾಭದಾಯಕ ಹಣ್ಣು ಕೃಷಿ, ತರಕಾರಿ ಬೆಳೆಯಬಹುದಾದ ಅವಕಾಶ, ದುಬಾರಿ ಬೆಲೆಯ ಹಣ್ಣು ತಳಿಗಳ ಬಗ್ಗೆ ಮಾಹಿತಿ ನೀಡಿದರು.
ವಿಷಯತಜ್ಞ ವೀರೇಂದ್ರ ಕುಮಾರ್, ಸಸ್ಯ ತಳಿ ರಕ್ಷಣೆ ಹಾಗೂ ರೈತರ ಹಕ್ಕುಗಳ ಕಾಯ್ದೆ ಬಗ್ಗೆ ವಿವರಿಸಿದರು. ಕೃಷಿ ತಜ್ಞ ಪ್ರಭಾಕರ್, ಕೃಷಿ ವಿಜ್ಞಾನ ಕೇಂದ್ರದ ಉದ್ದೇಶ, ಕಾರ್ಯ ಚಟುವಟಿಕೆ, ಕೆವಿಕೆ ರೈತರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಕೊಡಗು ಜಿಲ್ಲೆಯ ಸಮಗ್ರ ಕೃಷಿ ಕೈಪಿಡಿ ಬಗ್ಗೆ ವಿವರಿಸಿದರು.
ಜಿಲ್ಲೆಯ 20ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದ್ದರು.
ಸಂವಾದ ಬಳಿಕ ಅತ್ತೂರಿನಲ್ಲಿರುವ ಪ್ರಾತ್ಯಕ್ಷಿಕಾ ಕೇಂದ್ರಕ್ಕೆ ಭೇಟಿ ನೀಡಲಾಯಿತು.
ಬೆಳೆ ಸಂರಕ್ಷಣೆಗೆ ಪುರಸ್ಕಾರ
ಜಿಲ್ಲೆಯ ರೈತರು ಬತ್ತ, ಕಾಳುಮೆಣಸು, ಶುಂಠಿ, ಏಲಕ್ಕಿ, ಹಣ್ಣುಗಳು, ಔಷಧಿ ಸಸ್ಯಗಳು ಒಳಗೊಂಡಂತೆ ಸುಮಾರು 57 ಬೆಳೆಗಳಲ್ಲಿ ಸ್ಥಳೀಯವಾಗಿ, ವಿಶಿಷ್ಟವಾಗಿ ಸಂಗ್ರಹಿಸಿ, ಸಂರಕ್ಷಿಸಿದರೆ ನವದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ರು. 10 ಲಕ್ಷ ನಗದು ಪುರಸ್ಕಾರ ನೀಡಲಾಗುವುದು. ಡಿ.20 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದ್ದು, ಹೆಚ್ಚಿನ ವಿವರಗಳಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಬಹುದು ಎಂದು ವಿಜ್ಞಾನಿಗಳಾದ ವೀರೇಂದ್ರಕುಮಾರ್ ಹಾಗೂ ಕೆ.ಎ. ದೇವಯ್ಯ ಮಾಹಿತಿ ನೀಡಿದರು.