ಮಡಿಕೇರಿ: ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರಸಭೆ ಪೌರಾಯುಕ್ತ ಎನ್.ಎಂ. ಶಶಿಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪೌರ ಕಾರ್ಮಿಕರ ನಿವೇಶನ ಒದಗಿಸುವ ನಿಟ್ಟಿನಲ್ಲಿ ಅನುದಾನವಿದ್ದು, ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಪೌರ ಕಾರ್ಮಿಕರು ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ನಗರದ ಸ್ವಚ್ಛತೆ ಕಡೆ ಗಮನ ಹರಿಸುತ್ತಾರೆ. ನಗರ ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಮುಖ್ಯ. ಆ ನಿಟ್ಟಿನಲ್ಲಿ ನಗರದ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪೌರ ಕಾರ್ಮಿಕರು ನಗರ ಸಭೆಯಿಂದ ನೀಡಲಾಗಿರುವ ರೈನ್ಕೋಟ್ ಧರಿಸಿ ಕಾರ್ಯನಿರ್ವಹಿಸಬೇಕು. ಪೌರ ಕಾರ್ಮಿಕರು ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳಿಗೆ ಶಿಕ್ಷಣವನ್ನು ನೀಡಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಎನ್.ಎಂ. ಶಶಿಕುಮಾರ್ ಸಲಹೆ ಮಾಡಿದರು.
ದಸರಾ ಮುಗಿದ ನಂತರ ಪೌರ ಕಾರ್ಮಿಕರಿಗೆ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗುವುದು. ಡಿಸೆಂಬರ್ನಲ್ಲಿ ಪೌರ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.
ಮಡಿಕೇರಿ ತಾಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹೋಬ್ಳಿ ಮಾತನಾಡಿ, ಪೌರ ಕಾರ್ಮಿಕರಿಗೆ ತಕ್ಷಣವೇ ನಿವೇಶನ ಒದಗಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರ, ರಾಜ್ಯ ಪರಿಷತ್ ಸದಸ್ಯರಾದ ತಾಹೀರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ 23 ಮಂದಿ ಪೌರ ಕಾರ್ಮಿಕರಿಗೆ ಚೇರ್ ಮತ್ತು ಟೇಬಲ್ಗಳನ್ನು ವಿತರಿಸಲಾಯಿತು. ಶಬರಿನಾಥ್ ರೈ ಸ್ವಾಗತಿಸಿ, ಹನುಮಂತರಾಯ ಪ್ರಾರ್ಥಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.