ಸೋಮವಾರಪೇಟೆ: ವಿದ್ಯುತ್ ಕೇಂದ್ರದ ಅವ್ಯವಸ್ಥೆ ಬಗ್ಗೆ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಶಾಸಕರ ಲೋಪವನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಲೋಕೇಶ್, ಕಳೆದ 17 ರಿಂದ 18 ವರ್ಷಗಳ ಕಾಲ ಶಾಸಕರಾಗಿರುವ ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ವಿಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಇದೀಗ ಇಲ್ಲಿನ ವಿದ್ಯುತ್ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ಕೀಳುಮಟ್ಟದ ರಾಜಕರಣ ಮಾಡಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ದೂಷಿಸಿದ್ದಾರೆ. ಕಳೆದ 17 ವರ್ಷಗಳ ಕಾಲ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ವಿಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಸೋಮವಾರಪೇಟೆ ವಿಭಾಗದ ವಿದ್ಯುತ್ ಕೇಂದ್ರದ ಉಪಕರಣಗಳು ತುಂಬಾ ಹಳೆಯದಾಗಿದ್ದು, 33 ಕೆ.ವಿ. ಸಾಮರ್ಥ್ಯವನ್ನು ಮಾತ್ರ ಹೊಂದಿದೆ ನಿಜ. ಇದರ ಮೂಲಕ ಕಚೇರಿ ವ್ಯಾಪ್ತಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದು ಹಲವಾರು ವರ್ಷಗಳ ಸಮಸ್ಯೆಯೂ ಆಗಿದೆ. ಕಳೆದ ಸಾಲಿನಲ್ಲಿ ತಮ್ಮದೇ ಪಕ್ಷದ ಆಡಳಿತವಿದ್ದಾಗ ಶಾಸಕರಾಗಿದ್ದ ರಂಜನ್ ಅವರು ನಂತರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಸಮಯದಲ್ಲಿಯೇ ಇಲ್ಲಿನ ವಿದ್ಯುತ್ ಕೇಂದ್ರವನ್ನು ಮೇಲ್ದರ್ಜೆಗೇರಿಸಬಹುದಿತ್ತು. ಆ ಸಮಯದಲ್ಲಿ ಸುಮ್ಮನಿದ್ದ ಶಾಸಕರು ಇದೀಗ ರಾಜ್ಯ ಸರ್ಕಾರವನ್ನು ದೂರುತ್ತಿರುವುದು ಎಷ್ಟು ಸರಿ ಎಂದರು. ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಬದಲಿಗೆ ತಾವೇ ಪ್ರತಿಭಟನೆಯ ಹಾದಿ ಹಿಡಿದಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ. ಸರ್ಕಾರದಿಂದ ನಿಯಮಾನುಸಾರ ಬಿಡುಗಡೆಯಾಗುವ ಅನುದಾನವನ್ನು ಹೊರತುಪಡಿಸಿದಂತೆ ಶಾಸಕರು ಬೇರೆ ಯಾವುದೇ ವಿಶೇಷ ಯೋಜನೆಯನ್ನು ಸೋಮವಾರಪೇಟೆಯಲ್ಲಿ ಜಾರಿಗೊಳಿಸಿಲ್ಲ. ಇದರಿಂದಾಗಿ ಸೋಮವಾರಪೇಟೆ ತಾಲೂಕು ಕೇಂದ್ರ ಅಭಿವೃದ್ಧಿ ವಂಚಿತವಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯಾಗಿ ಕೆಳದರ್ಜೆಗಿಳಿಯುವಲ್ಲಿ ಆಶ್ಚರ್ಯವಿಲ್ಲ ಎಂದು ತಿಳಿಸಿದರು. ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಫಸಲು ನಷ್ಟವಾಗಿದ್ದು, ರೈತರಿಗೆ ಪರಿಹಾರ ದೊರಕಿಸಿಕೊಡಲು ಶಾಸಕರು ಮುಂದಾಗಲಿ ಎಂದು ಆಗ್ರಹಿಸಿದರು. 13 ರಂದು ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರಪೇಟೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ಕುಂದುಕೊರತೆಗಳ ಬಗ್ಗೆ ಮನವಿ ಸಲ್ಲಿಸಬಹುದು ಎಂದರು. ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಲೋಕೇಶ್, ಸತೀಶ್, ಹಕೀಂ, ಉದಯಶಂಕರ್, ಬಿ.ಜಿ. ಇಂದ್ರೇಶ್, ಬಸವರಾಜು ಇದ್ದರು.