ಶನಿವಾರಸಂತೆ: ರಾಜ್ಯದ ವಿವಿಧೆಡೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್, ಮಹಿಳಾ ದೌರ್ಜನ್ಯ ಘಟಕದ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಮೂಹ ಕಾಲೇಜಿನಿಂದ ಮುಖ್ಯರಸ್ತೆ ಮೂಲಕ ಪಟ್ಟಣದ ಕೆಆರ್ಸಿ ವೃತ್ತದ ವರೆಗೆ ಮೆರವಣಿಗೆ ತೆರಳಿ, ರಾಜ್ಯದಲ್ಲಿ ನಿರಂತರವಾಗಿ ಅತ್ಯಾಚಾರ ಎಸಗುವ ಕಾಮುಕರ ವಿರುದ್ಧ ಹಾಗೂ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸುವಂತೆಯೂ ಘೋಷಣೆ ಕೂಗಿದರು.
ನಂತರ ಕೆಆರ್ಸಿ ವೃತ್ತದಲ್ಲಿ ವಿದ್ಯಾರ್ಥಿ ಸಮೂಹ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಉಪನ್ಯಾಸಕ ಚಂದ್ರಕಾಂತ್ ಮಾತನಾಡಿ, ರಾಜ್ಯದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಮುಕರು ಚಿಕ್ಕ ಮಗುವಿನಿಂದ ಹಿಡಿದು ವೃದ್ಧೆಯ ಮೇಲೆಯೂ ಅತ್ಯಾಚಾರ ನಡೆಸುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಐಶಫಾತಿಮ ಮಾತನಾಡಿ, ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಇದಕ್ಕೆ ಕಾನೂನಿನ ತಿದ್ದುಪಡಿ ಅಗತ್ಯವಿದೆ. ಯಾರೇ ಆದರೂ ಅತ್ಯಾಚಾರ ನಡೆಸಿದವರಿಗೆ ಗಲ್ಲು ಶಿಕ್ಷೆನೀಡುವಂತೆ ಕಟ್ಟು ನಿಟ್ಟಿನ ಕಾನೂನು ಜಾರಿಯಾಗಬೇಕು. ಇದಕ್ಕೆ ಸಾರ್ವಜನಿಕರು ಸಹ ಬೀದಿಗಿಳಿದು ಪ್ರತಿಭಟಿಸಲು ಮಂದಾಗಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ದಯಾನಂದ್, ಮಹಿಳಾ ದೌರ್ಜನ್ಯ ಘಟಕದ ಉಪನ್ಯಾಸಕಿ ಶೋಭಾ, ಉಪನ್ಯಾಸಕರು ಭಾಗವಹಿಸಿದ್ದರು.