ಮಡಿಕೇರಿ: ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಮನಹರಿಸಬೇಕು. ಅರಣ್ಯ ನಾಶ ತಡೆಯಬೇಕು. ಹಾಗೆಯೇ ಮರ ಗಿಡಗಳನ್ನು ಯಥೇಚ್ಚವಾಗಿ ಬೆಳೆಸಬೇಕು. ಇದರಿಂದ ಪರಿಸರ ಸಮತೋಲನ ಕಾಣಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಹಿಪ್ಪರಗಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ, ಅರಣ್ಯ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಒಡಿಪಿ ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ ಹಾಗೂ ವೈ.ಎಂ.ಸಿ.ಎ., ಸಹಯೋಗದಲ್ಲಿ ಗುರುವಾರ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ಮಾತನಾಡಿ, ಪರಿಸರದ ಮಹತ್ವ ಜಾಗೃತಿ ಕುರಿತು ಉತ್ತಮ ಪರಿಸರ ಹೊಂದಿರುವ ಶಾಲೆಗಳಿಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಈ ಪ್ರಸಕ್ತ ವರ್ಷದ ಪರಿಸರ ಘೋಷ ವಾಕ್ಯ 'ನಮ್ಮ ಧ್ವನಿ ಎತ್ತರಕ್ಕೆ ಏರಬೇಕು. ಆದರೆ ಸಮುದ್ರ ಮಟ್ಟವಲ್ಲ' ಎಂದು ತಿಳಿಸಿದರು.
ಬಳಿಕ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ ನಗರಸಭಾ ಅಧ್ಯಕ್ಷೆ ಜುಲೇಕಾಭಿ ಮಾತನಾಡಿ, ಮಡಿಕೇರಿ ನಗರದಲ್ಲಿ ಸುಂದರ, ಶುಚಿತ್ವ ಮತ್ತು ಶುದ್ಧ ಪರಿಸರ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಎಂ. ಕಾಂತರಾಜು, ಮೈಸೂರು ಒಡಿಪಿ ಸಂಸ್ಥೆಯ ಸಂಯೋಜಕ ಜಯರಾಮ್, ವಲಯ ಅರಣ್ಯಾಧಿಕಾರಿ ರಂಗಸ್ವಾಮಿ, ಸಂತ ಮೈಕಲರ ಶಾಲೆಯ ಧರ್ಮಗುರು ಪ್ರಶಾಂತ್, ಒಡಿಪಿ ಸಂಸ್ಥೆಯ ಜಾಯ್ಸ್ ಮೇನೆಜಸ್, ಮಾರ್ಗರೇಟ್ ಪಾಲ್ಗೊಂಡರು. ನ್ಯಾಯಾಲಯ ಇಲಾಖೆಯ ಜಯಪ್ಪ ನಿರೂಪಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದಮಯಂತಿ ವಂದಿಸಿದರು.
ಬಹುಮಾನ ವಿತರಣೆ
ಪ್ರಬಂಧ ಸ್ಪರ್ಧೆ- ಪ್ರೌಢಶಾಲೆ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ರಿಯಾ ತಿಮ್ಮಯ್ಯ (ಪ್ರಥಮ), ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಡಿ.ಸಿ. (ದ್ವಿತೀಯ), ಸಂತ ಮೈಕಲರ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ಬೋಜಮ್ಮ (ತೃತೀಯ). ಕಾಲೇಜು ವಿಭಾಗದಲ್ಲಿ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳಾದ ಜ್ಯೋತಿ ಎಚ್.ಎಂ. (ಪ್ರಥಮ), ಕ್ಷಿತಿಜ ಕೆ.ಜಿ.ಎಸ್. (ದ್ವಿತೀಯ), ಸುಪ್ರಿಯ (ತೃತೀಯ) ಸ್ಥಾನ ಪಡೆದಿರುತ್ತಾರೆ. ಚಿತ್ರಕಲಾ ಸ್ಪರ್ಧೆ- ಪ್ರೌಢಶಾಲಾ ವಿಭಾಗದಲ್ಲಿ ಜನರಲ್ ತಿಮ್ಮಯ್ಯ ಶಾಲೆಯ ಡಿಂಪಲ್ .ಎ (ಪ್ರಥಮ). ಸಂತ ಜೋಸೆಫರ ಪ್ರೌಢಶಾಲೆಯ ವಚನ್ ಕೆ.ಎ. (ದ್ವಿತೀಯ), ಸಂತ ಮೈಕಲರ ಪ್ರೌಢ ಶಾಲೆಯ ಸುಮುಖಿ ಎಲ್. (ತೃತೀಯ). ಕಾಲೇಜು ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ನಿಶಿತ್ ಐ.ಎನ್. (ಪ್ರಥಮ), ಪಲ್ಲವಿ ಸಿ.ವಿ. (ದ್ವಿತೀಯ) ಸ್ಥಾನಪಡೆದಿದ್ದು, ಕಾರ್ಯಕ್ರಮದಲ್ಲಿ ಇವರಿಗೆ ಬಹುಮಾನ ವಿತರಿಸಲಾಯಿತು.