ಮಡಿಕೇರಿ: ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.86 ಅಂಕ ಗಳಿಸಿದ ಎನ್.ವಿ. ಹೃತಿಕಾ, ಶೇ.85 ಅಂಕ ಗಳಿಸಿದ ಎಂ.ಎ. ಜಂಸೀರಾ, ಶೇ.83 ಅಂಕ ಗಳಿಸಿದ ಎಂ.ಎನ್. ಸೌಮ್ಯ, ಶೇ.80 ಅಂಕ ಪಡೆದ ಬಿ.ಎ. ಪ್ರಜ್ಞಾ ಅವರಿಗೆ ಮಿಸ್ಟಿ ಹಿಲ್ಸ್ ವತಿಯಿಂದ ತಲಾ ರು. 4 ಸಾವಿರ ಪ್ರೋತ್ಸಾಹ ಧನ ನೀಡಲಾಯಿತು. ಈ ಸಂದರ್ಭ ಹಾಜರಿದ್ದ ಮಿಸ್ಟಿ ಹಿಲ್ಸ್ ಅಧ್ಯಕ್ಷ ಡಾ. ಸಿ.ಆರ್. ಪ್ರಶಾಂತ್, ಕಳೆದ ಹಲವಾರು ವರ್ಷಗಳಿಂದಲೂ ಹಾಕತ್ತೂರು ಪ್ರೌಢಶಾಲೆಗೆ ಮಿಸ್ಟಿಹಿಲ್ಸ್ ವತಿಯಿಂದ ಅನೇಕ ಯೋಜನೆಗಳಡಿ ನೆರವು ನೀಡಲಾಗುತ್ತಿದೆ. ಶಾಲೆಯ ವತಿಯಿಂದ ಯೋಜನೆಗಳ ಸಮರ್ಪಕ ಅನುಷ್ಠಾನವಾಗಿದೆ ಎಂದು ಶ್ಲಾಘಿಸಿದರು. ರೋಟರಿ ಮಿಸ್ಟಿ ಹಿಲ್ಸ್ನ ಮುಂದಿನ ಸಾಲಿನ ಅಧ್ಯಕ್ಷ ಅಂಬೆಕಲ್ ವಿನೋದ್ ಕುಶಾಲಪ್ಪ, ನಿರ್ದೇಶಕ ದೇವಣೀರ ಎಂ. ತಿಲಕ್, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಇದ್ದರು.
ಹಾಕತ್ತೂರು ಶಾಲೆಗೆ ಕೊಡುಗೆ
ಮಡಿಕೇರಿ: ಹಾಕತ್ತೂರು ಸರ್ಕಾರಿ ಪ್ರೌಢಶಾಲೆಗೆ ದಾನಿಗಳಾದ ಕೊಂಗೇಟಿರ ಮಾದಪ್ಪ ಗಣಪತಿ, ಮಾತಂಡ ಚಂಗಪ್ಪ ಕಾರ್ಯಪ್ಪ ಅವರು ರೆಡಿಯೋ, ಡಿವಿಡಿ ಪ್ಲೇಯರ್ ಅನ್ನು ಉಚಿತವಾಗಿ ನೀಡಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಶಾಲಾ ವಿದ್ಯಾರ್ಥಿನಿ ಎನ್ .ವಿ. ದೃತಿಕಾಳಿಗೆ ರು. 2 ಸಾವಿರ ಆರ್ಥಿಕ ನೆರವು ನೀಡಿದ್ದಾರೆ. ಅಂತೆಯೇ ಹಾಕತ್ತೂರು ಪ್ರೌಢಶಾಲೆಯ ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ದಾನಿಗಳು ನೆರವು ನೀಡಿದ್ದಾರೆ. ದಂಬೆಕೋಡಿ ಲೀಲಾವತಿ ಚಿಣ್ಣಪ್ಪ ( 15 ಸಾವಿರ) ಶ್ರೀಪತಿ ಹೆಬ್ಬಾರ್ ( 6 ಸಾವಿರ), ಬಿಳಿಗೇರಿಯ ಮಂಜ್ಞರ ಸಾಬ ತಿಮ್ಮಯ್ಯ ( 10 ಸಾವಿರ), ಕಗ್ಗೋಡ್ಲಿನ ಮಂದ್ರೀರ ನಾಣಯ್ಯ ( 2 ಸಾವಿರ), ವರ್ಸಿಪುಲ್ ಮಾಸ್ಟರ್, ಪ್ರಿಮೆಸನ್ ಹಾಲ್ಸ್ ಸಂಸ್ಥೆ ವತಿಯಿಂದ ರು. 2 ಸಾವಿರ, ದಂಬೆಕೋಡಿ ಲೀಲಾಧರ ರು. 2 ಸಾವಿರ, ಚೆಟ್ಟಿಮಾನಿಯ ಕೆ.ಎಸ್. ರಾಮಮೂರ್ತಿ ರು. 1 ಸಾವಿರ ಮಲ್ಲಂಗಡ ಕುಸುಮ್ ನೆಹರು ರು. 10,800, ಮೇಕೇರಿಯ ಓಡಿಯನ ಹೀಮನ್ ಕುಮಾರ್ ರು. 500ನ್ನು ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ನೀಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಅಪಾಯಕಾರಿ ಕೊಳವೆ ಬಾವಿ ಮುಚ್ಚಿದ ಬಾಲಕರು
ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ತೆರೆದ ಸ್ಥಿತಿಯಲ್ಲಿದ್ದ ಕೊಳವೆಬಾವಿಯನ್ನು ಸ್ಥಳೀಯ ಪುಟಾಣಿಗಳು ಸೇರಿ ಮುಚ್ಚಿದ್ದು, ಮುಂದಾಗಲಿರುವ ಅನಾಹುತ ನಡೆಯದಂತೆ ಎಚ್ಚರವಹಿಸಿದ್ದಾರೆ. ಸ್ಥಳೀಯ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕೊರೆಯಲಾಗಿದ್ದ ಕೊಳವೆಬಾವಿಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ವಾಸವಿ ಬಾಲಕರ ಸಂಘ ಸದಸ್ಯರು ಭಾನುವಾರ ಕೊಳವೆ ಬಾವಿಯನ್ನು ಮುಚ್ಚಿ ಅಪಾಯ ಸಂಭವಿಸದಂತೆ ಎಚ್ಚರವಹಿಸಿದ್ದಾರೆ. ಸಂಘದ ನಾಯಕ ಗೌರವ್ ನೇತೃತ್ವದಲ್ಲಿ ಈ ಕಾರ್ಯ ನಡೆಯಿತು.