ಕ.ಪ್ರ.ವಾರ್ತೆ , ಮಾಲೂರು , ಡಿ.9
ಗ್ರಾಮಾಂತರ ಪ್ರದೇಶಗಳಲ್ಲಿನ ನಿರೋದ್ಯೋಗಿ ಯುವಕ ಯುವತಿಯರಿಗೆ ಕೇಂದ್ರ ಸರ್ಕಾರ ರಾಜೀವ್ ಗಾಂಧಿ ಚೈತನ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಸ್ವಾವಲಂಬಿ ಜೀವನ ನಡೆಸಲು ಅರ್ಹರು ಈ ಯೋಜನೆಯ ಸದುಪಯೋಗ ಪಡೆದು ಕೊಳ್ಳಬೇಕೆಂದು ಕಾರ್ಯನಿರ್ವಹಣಾಧಿಕಾರಿ ಸಂಜೀವಯ್ಯ ಹೇಳಿದರು.
ಅವರು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳಿಗಾಗಿ ಸೋಮವಾರ ಆಯೋಜಿಸಲಾಗಿದ್ದ ಮಾಹಿತಿ ನೀಡುವ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳಲ್ಲಿ ನಿರುದ್ಯೋಗ ಕಾಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗ್ರಾಮಾಂತರ ಪ್ರದೇಶದಲ್ಲಿರುವ ರೈತ ಕುಟುಂಬದ ಯುವಕರಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಅರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜೀವ್ ಗಾಂಧಿ ಚೈತನ್ಯ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಕುಲ ಕಸುಬು ಸೇರಿದಂತೆ ಯುವಕರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗಿರುವ ಈ ಯೋಜನೆಯಡಿ ತಲಾ 6 ಲಕ್ಷ ರು. ವರೆಗೆ ಅರ್ಥಿಕ ಸಹಾಯ ಪಡೆಯಬಹುದಾಗಿದೆ ಎಂದರು.
ಪ್ರತಿ ಪಂಚಾಯ್ತಿಗಳಿಂದ 40 ನಿರೋದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದ ಅವರು ಶೇ.25 ರಷ್ಟು ಮೀಸಲಾತಿ ಇರುವ ಈ ಯೋಜನೆಯಲ್ಲಿ ಅಂಗವಿಕಲರಿಗಾಗಿ ಶೇ.3 ರಷ್ಟು ಮೀಸಲಿಡಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಬಸವ ಹಾಗೂ ಇಂದಿರಾ ಅವಾಜ್ ಯೋಜನೆಯಡಿ 1655 ಮನೆಗಳನ್ನು ವಿತರಿಸಲಾಗಿದೆ. ಈಗಾಗಲೇ ಬಸವ ವಸತಿ ಯೋಜನೆಯಲ್ಲಿ 34 ಲಕ್ಷ ರು. ವಿತರಿಸಲಾಗಿದೆ. ಹಾಲಿ ವಸತಿ ಯೋಜನಯಡಿಯಲ್ಲಿ 2 ಕೋಟಿ 48 ಲಕ್ಷ ರು.ಗಳು ಈಗಾಗಲೇ ಪಿಡಿಓರವರ ಖಾತೆಯಲ್ಲಿ ಜಮಾ ಆಗಿದ್ದು, ಫಲಾನುಭವಿಗಳು ವಸತಿ ನಿರ್ಮಾಣ ಮಾಡಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ತಾಪಂ ಅಧ್ಯಕ್ಷ ಪುಟ್ಟಸಾಮಿ, ಉಪಾಧ್ಯಕ್ಷೆ ರಾಜಮ್ಮ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ವಿ.ಲೋಕೇಶ್ ಇದ್ದರು.