ಕೋಲಾರ: ತಾಲೂಕಿನ ಕುರುಗಲ್ ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ಎಂದು ಕಲ್ಕೇರಿ ಗ್ರಾಮದವರು ಪ್ರತಿಭಟಿಸಿದ್ದರಿಂದ ಕುಪಿತರಾದ ದುಷ್ಕರ್ಮಿಗಳು ಪ್ರತೀಕಾರವಾಗಿ ಗ್ರಾಮದ ಕೆ.ವಿ. ನಾರಾಯಣಸ್ವಾಮಿ ಎಂಬುವರ ರಾಗಿ ಮೇದೆಗಳಿಗೆ ಬೆಂಕಿರುವುದರಿಂದ ಸುಮಾರು 2 ಲಕ್ಷ ರು. ನಷ್ಟ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ಕುರುಗಲಲ್ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯುವಂತೆ ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಕೋಲಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಕಲ್ಕೇರಿಯ ಕೆ.ವಿ. ನಾರಾಯಣಸ್ವಾಮಿ ನೀಡಿರುತ್ತಾರೆಂದು ಅವರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಮರಳು ದಂಧೆ ನಡೆಸುತ್ತಿರುವವರು ರಾಗಿ ಮೇದೆಗೆ ಬೆಂಕಿ ಹಾಕಿದ್ದಾರೆಂದು ದೂರಿದ್ದಾರೆ. ಕಲ್ಕೇರೆಯ ಮುನಿರಾಜು, ಅನೀಲ್, ಸುನೀಲ್, ಆಂಜಿನಪ್ಪ, ಚಂದ್ರಪ್ಪ ಎಂಬುವರನ್ನು ಎತ್ತಿಕಟ್ಟಿ ಇಲ್ಲ ಸಲ್ಲದ ವಿಷಯಗಳಿಗೆ ಜಗಳ ತೆಗೆದು ಕೆ.ವಿ. ನಾರಾಯಣಸ್ವಾಮಿ ರವರಿಗೆ ಸೇರಿದ ರಾಗಿ ಮೇದೆಗಳಿಗೆ ಬೆಂಕಿ ಇಟ್ಟಿದ್ದಾರೆ. ಈ ರೀತಿ ಮರಳು ದಂಧೆ ನಡೆಸುತ್ತಿರುವವರು ಇದನ್ನು ತಡೆಯಲು ಪ್ರಯತ್ನಪಟ್ಟವರ ಮೇಲೆ ಈ ಮೊದಲು ಸಹ ದೌರ್ಜನ್ಯ ಮಾಡಿದ್ದರ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದ್ದರೂ ಮತ್ತೆ ಮತ್ತೆ ಈ ರೀತಿ ದೌರ್ಜನ್ಯಗಳು ನಡೆಯುತ್ತಿದೆ ಎಂದು ರೈತ ಸಂಘದ ಮುಖಂಡರು ದೂರಿದ್ದಾರೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು, ನಷ್ಟ ಹೊಂದಿರುವ ರೈತನಿಗೆ ಪರಿಹಾರ ನೀಡಬೇಕೆಂದು ಜಿಲ್ಲಾ ಆಡಳಿತನ್ನು ಆಗ್ರಹಿಸಿದ್ದಾರೆ.
ಕೊಲೆ ಆರೋಪಿ ಸೆರೆ
ಗೌರಿಬಿದನೂರು: ಸುಮಾರು ಎರಡು ತಿಂಗಳ ಹಿಂದೆ ಡಿ.ಪಾಳ್ಯ ಗ್ರಾಮದ ದಾಳಿ ನರಸಿಂಹಶಾಸ್ತ್ರಿ ಎಂಬ ಒಂಟಿ ವಯೋವೃದ್ಧನನ್ನು ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿವೈಎಸ್ಪಿ ದೇವಯ್ಯನವರು ಅಭಿನಂದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಪಾಳ್ಯ ಗ್ರಾಮದ ಡಿ.ವಿ. ಶ್ರೀಕಾಂತ್, ಪ್ರಭಾಕರ್ ಹಾಗೂ ಹಿರೇಬಿದನೂರು ಗ್ರಾಮದ ನಾರಾಯಣಸ್ವಾಮಿ ಎಂಬವರನ್ನು ಬಂಧಿಸಿರುವ ಪೊಲೀಸರು ಅವರಿಂದ 2600 ನಗದು 3 ಮೊಬೈಲ್, ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಶಿಡ್ಲಘಟ್ಟದ ನಾಗರಾಜ್ ತಲೆತಪ್ಪಿಸಿಕೊಂಡಿದ್ದು, ಅವನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಯಲ್ಲಮ್ಮ ಜಾತ್ರೆ
ಟೇಕಲ್: ಬಂಡೂರು ಅಗ್ರಹಾರ ಗ್ರಾಮದಲ್ಲಿ ಕಳೆದ ಹದಿನೈದು ವರ್ಷದಿಂದ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಮತ್ತು ಕರಗ ಮಹೋತ್ಸವ ಆಚರಿಸುತ್ತಿರುವ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಡಾ.ಪಿ.ನಾರಾಯಣಸ್ವಾಮಿ ಯವರ ಕಾರ್ಯ ಶ್ಲಾಘನೀಯವೆಂದು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ತಿಳಿಸಿದರು. ಅವರು ಟೇಕಲ್ನ ಬಂಡೂರು ಅಗ್ರಹಾರ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹದಿನೈದನೇ ವರ್ಷದ ರೇಣುಕಾ ಯಲ್ಲಮ್ಮ ಜಾತ್ರೆ ಮತ್ತು ಕರಗ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಳಗದ ಜಿಲ್ಲಾಧ್ಯಕ್ಷ ಡಾ.ಪಿ. ನಾರಾಯಣಸ್ವಾಮಿ ಮಾತನಾಡಿ ಪ್ರತಿ ವರ್ಷ ವ್ಯಾಸ ಪೂರ್ಣಿಮೆ ದಿನದಂದು ಸವದತ್ತಿ ಯಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಅದೇ ದಿನ ಗ್ರಾಮದಲ್ಲಿರುವ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಜಾತ್ರೆ ಮತ್ತು ಕರಗ ಮಹೋತ್ಸವ ಆಚರಿಸಿಕೊಂಡು ಬರುತ್ತಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರೇಣುಕಾ ಯಲ್ಲಮ್ಮ ಬಳಗದ ತಾಲೂಕು ಅಧ್ಯಕ್ಷ ಚಿಕ್ಕಾಪುರ ಸಿ.ಎಮ್. ನಾರಾಯಣಸ್ವಾಮಿ, ಬಂಗಾರಪೇಟೆ ಘಟಕದ ಅಧ್ಯಕ್ಷ ವೆಂಕಟೇಶಯ್ಯ, ನಗರಾಧ್ಯಕ್ಷ ಬಿಜೆಪಿ ಹನುಮಪ್ಪ, ವೆಂಕಟಲಕ್ಷ್ಮಿ ನಾರಾಯಣಸ್ವಾಮಿ, ಟೇಕಲ್ ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಣ್ಣ, ಬಿಜೆಪಿ ತಾಲೂಕು ಅದ್ಯಕ್ಷ ನಾರಾಯಣಗೌಡ, ತಾ.ಪಂ. ಮಾಜಿ ಅಧ್ಯಕ್ಷ ಆನಂದ್, ಮುಖಂಡ ಕೃಷ್ಣಯ್ಯ(ಕಿಟ್ಟಿ), ಶಿವಣ್ಣ, ನಾರಾಯಣಸ್ವಾಮಿ, ಬಿ.ಆರ್.ವೆಂಕಟೇಶ್, ಮುಂತಾದವರು ಹಾಜರಿದ್ದರು.