ಕೋಲಾರ: ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿ, ಹಣದುಬ್ಬರ ಕಡಿಮೆ ಮಾಡಿ ಎಲ್ಲ ವರ್ಗದ ಹಿತ ಕಾಪಾಡಬೇಕಾಗಿದ್ದ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಥಳಕು ಬಳಕಿನ ಬೇಕಾಬಿಟ್ಟಿ ಬಜೆಟ್ ಮಂಡಿಸಿದ್ದಾರೆಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಕೋಲಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರದ ಈ ಸಾಲಿನ ಬಜೆಟ್ ಜನ ವಿರೋಧಿಯಾಗಿದೆ. ಇದೊಂದು ಅಭಿವೃದ್ಧಿಗೆ ಪೂರಕವಲ್ಲದ ನಿರಾಶಾದಾಯಕ ಬಜೆಟ್ ಆಗಿದೆ ಎಂದರು.
ದೇಶದ ಆರ್ಥಿಕ ತಜ್ಞರು ಸಹ ಕೇಂದ್ರ ಬಜೆಟ್ ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಜನತೆಯ ನಿರೀಕ್ಷೆಗಳನ್ನು ಹುಸಿಗೊಳಿಸಲಾಗಿದೆ ಎಂದು ದೂರಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ಗೂ ಯಾವುದೇ ಕಿಮ್ಮತ್ತಿಲ್ಲ. ಫೆ.8ಕ್ಕೆ ಬಜೆಟ್ ಮಂಡಿಸಲಾಗಿದೆ. ಏ.1ರಿಂದ ಬಜೆಟ್ನಲ್ಲಿ ಘೋಷಣೆ ಆಗಿರುವ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ವಿಧಾನಸಭೆಗೆ ಮಾರ್ಚ್ನಲ್ಲೇ ಚುನಾವಣೆ ಘೋಷಣೆ ಆದರೆ ಯಾವುದೇ ಯೋಜನೆ ಜಾರಿಗೆ ಬರಲು ಸಾಧ್ಯವೇ ಇಲ್ಲವೆಂದರು.