ಕೊಪ್ಪಳ: ನೂತನ ಪಿಂಚಣಿ ಯೋಜನೆಗೆ ಒಳಪಡುವ ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನ(ಎಸ್ಎಸ್ಎ) ಯೋಜನೆಯಡಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು ಸರ್ವ ಸಮಯ ವೇತನಕ್ಕೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕಾಲಕಾಲಕ್ಕೆ ಶಿಕ್ಷಕರಿಗೆ ವೇತನ ಪಾವತಿಯಾಗುತ್ತಿಲ್ಲ. ಇದರಿಂದ ಬೇಸತ್ತು ಸೋಮವಾರ ಜಿಲ್ಲಾಧಿಕಾರಿ ಮತ್ತು ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಫೆ. 13ರಂದು ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಎಸ್ಎಸ್ಐ ಯೋಜನೆಯಡಿ ಸುಮಾರು 1141 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಟಿಜಿಟಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಸಿಗುತ್ತಿಲ್ಲ. ಇದರಿಂದ ನಮ್ಮ ಗೋಳು ಹೇಳತೀರದಾಗಿದೆ ಎನ್ನುತ್ತಾರೆ ಶಿಕ್ಷಕರು.
ಕಳೆದ 8-10 ತಿಂಗಳಿಂದ ಈ ಸಮಸ್ಯೆ ಕೊಪ್ಪಳ ಜಿಲ್ಲೆಯ ಶಿಕ್ಷಕರನ್ನು ಕಾಡುತ್ತಿದ್ದು, ಬರೊಬ್ಬರಿ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ಪಾತವತಿಯಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ವೇತನವೇ ಸಿಕ್ಕಿಲ್ಲ. ಈ ಮೊದಲು ವೇತನಕ್ಕೆ ಆಗ್ರಹಿಸಿ ಹಲವು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ವೇತನವಿಲ್ಲದೆ ಗೋಳಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಶಿಕ್ಷಕರು.
ಇಲ್ಲಿಯ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದ ಜಿಲ್ಲೆಯ 1141 ಶಿಕ್ಷಕರು ಮೂರು ತಿಂಗಳಿಗೊಮ್ಮೆ ವೇತನ ಪಡೆಯುವಂತಾಗಿದೆ. ಈಗ ಬರೋಬ್ಬರಿ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ. ಈಗಾಗಲೇ ಜಿಲ್ಲೆಯ ಆಯಾ ತಾಲೂಕಿನ ಶಿಕ್ಷಕರು ಶಿಕ್ಷಣಾಧಿಕಾರಿಗಳಿಗೆ ಹತ್ತು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮಾತ್ರ ನಮ್ಮ ಮಾತಿಗೆ ಕಿವಿಗೊಡುತ್ತಿಲ್ಲ. ಆದರೆ, ನೋವು ಅನುಭವಿಸುವುದು ತಪ್ಪುತ್ತಿಲ್ಲ ಎನ್ನುತ್ತಾರೆ.
ಕುಟುಂಬಗಳು ತೊಂದರೆಯಲ್ಲಿ...
ಶಿಕ್ಷಕರಿಗೆ ಸರಿಯಾಗಿ ವೇತನ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅವರಿವರ ಹತ್ತಿರ ಸಾಲ ಸೂಲ ಮಾಡಿ ಕುಟುಂಬ ನಿರ್ವಹಣೆ ಮಾಡುವ ದುಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ನೋವು ವ್ಯಕ್ತಪಡಿಸುತ್ತಾರೆ ಶಿಕ್ಷಕರು.
ಈ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ. ಹೀಗೆ ಮುಂದುವರಿದರೆ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ಹೀಗಾಗಿ, ಫೆ. 12ರೊಳಗಾಗಿ ಜಿಲ್ಲೆಯ ಎಲ್ಲ ಎಸ್ಎಸ್ಎ ಯೋಜನಯೆಡಿ ನೇಮಕವಾದ ಶಿಕ್ಷಕರ ವೇತನ ಪಾವತಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಫೆ. 13ರಂದು ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಶಿಕ್ಷಕರಾದ ಬಾಳಪ್ಪ ಕಾಳಿ, ಶರಣಪ್ಪ ತೆಮ್ಮಿನಾಳ, ಹನುಮಂತಪ್ಪ ಕುರಿ, ಬಸನಗೌಡ ಹೊಸಮನಿ, ಯದುರಾಜ, ವಿಶ್ವನಾಥ, ರಮೇಶ, ಶಂಕರ ಹಳ್ಳಿ ಇತರರು ಇದ್ದರು.