ಕೊಪ್ಪಳ

371 ಜಾರಿ ತನಕ ನೇಮಕಾತಿ ಬೇಡ

ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 7
ಹೈದ್ರಾಬಾದ್ ಕರ್ನಾಟಕಕ್ಕೆ 371ನೇ ಕಲಂ ಸಂಪೂರ್ಣ ಜಾರಿಯಾಗುವ ತನಕ ಹೈ-ಕ ಭಾಗದಲ್ಲಿ ಯಾವುದೇ ನೇಮಕಾತಿ ಮಾಡಿಕೊಳ್ಳಬಾರದು. ಅದರಂತೆ ಸಿಎಂ ಜಗದೀಶ ಶೆಟ್ಟರ್ ಮಾತಿನಂತೆ ನಡೆದುಕೊಂಡು ಈಗ ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆದಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ಘಟಕದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸಾಹಿತ್ಯ ಭವನದಿಂದ ಅಶೋಕ ವೃತ್ತದ ವರೆಗೆ ಪ್ರತಿಭಟನೆ ನಡೆಸಿದ ಹೈ-ಕ ಹೋರಾಟ ಸಮಿತಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಮೊದಲು ಹೈ-ಕ ಭಾಗಕ್ಕೆ 371ನೇ ಕಲಂ ಜಾರಿ ಮಾಡಲು ಕಾನೂನು ರಚಿಸಿ, ಪ್ರತ್ಯೇಕ ಮಂಡಳಿ ರಚನೆ ಮಾಡಿ ನಂತರ ಹೈದ್ರಾಬಾದ್ ಕರ್ನಾಟಕದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ತನ್ನ ಪಾಲಿನ ಎಲ್ಲ ಕಾರ್ಯವನ್ನು ನಿರ್ವಹಿಸಿದೆ. ಆದರೆ, ರಾಜ್ಯ ಸರ್ಕಾರ ಹೈ-ಕ ಭಾಗಕ್ಕೆ ಪ್ರತ್ಯೇಕ ಮಂಡಳಿ ಮತ್ತು ಕಾನೂನು ರಚನೆ ಮಾಡುವಲ್ಲಿ ವಿಳಂಬ ಮಾಡಿ ಈ ಭಾಗದ ಹೈ-ಕ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾತಿಗೆ ತಪ್ಪಿದ ಸಿಎಂ: ಹೈ-ಕ ಹೋರಾಟ ಸಮಿತಿ ಅಧ್ಯಕ್ಷ ಡಾ. ವೈಜನಾಥ ಪಾಟೀಲ್ ನೇತೃತ್ವದಲ್ಲಿ ಹೋರಾಟ ನಡೆದಿದ್ದು, 371ನೇ ಕಲಂ ಸಂಪೂರ್ಣ ಜಾರಿಯಾಗುವ ವರೆಗೆ ನೇಮಕಾತಿ ಬೇಡ ಎಂದು ಒತ್ತಾಯ ಮಾಡಿದೆ. ಅದರಂತೆ ಸಿಎಂಗೆ ಮನವಿ ಮಾಡಲಾಗಿದೆ. ಆದರೆ, ಸಿಎಂ ಜಗದೀಶ ಶೆಟ್ಟರ್ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಈಗ ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಮುಂದಾಗಿ ಹೈ-ಕ ಭಾಗಕ್ಕೆ ತುಂಬಾ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೇಮಕಾತಿ ನಿಲ್ಲಿಸಿ: ರಾಜ್ಯಾದ್ಯಂತ ಕರೆದಿರುವ 4 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು ಕೂಡಲೇ ನಿಲ್ಲಿಸಬೇಕು. ಹೆ-ಕಕ್ಕೆ 371ನೇ ಕಲಂನಡಿ ಸಿಗಬೇಕಾದ ಎಲ್ಲ ಸ್ಥಾನಮಾನ ದೊರೆತಾದ ಮೇಲೆ ಎಲ್ಲ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು. ಅದನ್ನು ಬಿಟ್ಟು ರಾಜಕೀಯ ಉದ್ದೇಶದಿಂದ ಈ ರೀತಿ ತರಾತುರಿಯಲ್ಲಿ ನೇಮಕ ಮಾಡಿಕೊಂಡು ಸೈ ಎನಿಸಿಕೊಳ್ಳುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಈಗ ಕರೆದಿರುವ ನಾಲ್ಕು ಸಾವಿರ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಸ್ಥಗಿತ ಮಾಡಿ ಹೈ-ಕ ಭಾಗಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೈ-ಕ ಸಮಿತಿ ಮುಖಂಡರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೇ ನೇಮಕಾತಿ ಮುಂದುವರಿದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇಲ್ಲಿಯ ಅಶೋಕ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಹೈ-ಕ ಹೋರಾಟ ಸಮಿತಿ ಮುಖಂಡರಾದ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ರಮೇಶ ತುಪ್ಪದ, ಮಂಜುನಾಥ ಅಂಗಡಿ, ಹುಲುಗಪ್ಪ ಕಟ್ಟಿಮನಿ, ಬಸವರಾಜ ಶಿರಗುಂಪಿ ಶೆಟ್ಟರ್, ಪರಶುರಾಮನ ಮ್ಯಾಳಿ, ಜಗದೀಶಗೌಡ ತಗ್ಗಿನಮನಿ, ಪ್ರವೀಣ, ಜೀವನ್ ಹಿರೇಮಠ, ಹುಸೇನ್ ಪಾಷಾ, ಹರೀಶ ಪಾನಂಘಂಟಿ, ಗಿರೀಶ ಪಾನಂಘಟಿ, ಮಂಜುನಾಥ ಬೆಲ್ಲದ್, ಪೃಥ್ವಿರಾಜ್ ಸೇರಿದಂತೆ ಇತರ ಮುಖಂಡರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!