ಕೊಪ್ಪಳ

1,693 ಕಾರ್ಡ್ ರದ್ದು: ಪಡಿತರ ಪರದಾಟ

ಕನ್ನಡಪ್ರಭ ವಾರ್ತೆ, ಗಂಗಾವತಿ, ಜು. 1
ತೀರಾ ಹಿಂದುಳಿದ ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರ ಪಡಿತರ ಚೀಟಿ ವಿತರಿಸಿದ್ದರೂ ಈಗ ಅಸಮರ್ಪಕ ಅರ್ಜಿ ಮತ್ತು ಅರ್ಹರಿಲ್ಲದವರು ಲಾಭ ಪಡೆಯುತ್ತಿದ್ದಾರೆಂಬ ಕಾರಣಕ್ಕೆ 1693 ಪಡಿತರ ಕಾರ್ಡ್‌ಗಳನ್ನು ಸರ್ಕಾರ ರದ್ದು ಪಡಿಸಿದೆ.
ಆರು ತಿಂಗಳಿನಿಂದ ಸರ್ಕಾರ ಹೊಸದಾಗಿ ಗ್ರಾಹಕರಿಂದ ಅರ್ಜಿ ಪಡೆದು ಕಾರ್ಡ್ ನೀಡುತ್ತಿದೆ. ಅಲ್ಲದೆ ಹೊಸ ಚೀಟಿ ಬೇಕೆನ್ನುವವರು ಗುರುತಿನ ಚೀಟಿ, ವಿದ್ಯುತ್ ಪಾವತಿಸಿದ ಬಿಲ್, ಹಳೆ ಪಡಿತರ ಚೀಟಿ, ಆಧಾರ್ ಕಾರ್ಡ್ ಉಳ್ಳವರಿಂದ ಸಾಕ್ಷಿ ನೀಡುವ ಮೂಲಕ ಕಾರ್ಡ್ ಪಡೆಯುತ್ತಿದ್ದರು. ಈ ದಾಖಲೆಗಳನ್ನು ನೀಡಿ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದರು. ನಗರ ಸೇರಿದಂತೆ ತಾಲೂಕಿನಲ್ಲಿ ಒಟ್ಟು 35,357 ಜನರು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 11,678 ಜನರಿಗೆ ಚೀಟಿ ನೀಡಲಾಗಿದ್ದು, ಅದರಲ್ಲಿ ಸರಿಯಾದ ರೀತಿ ಅರ್ಜಿ ಭರ್ತಿ ಮತ್ತು ಅರ್ಹರಿಲ್ಲದವರು ಇಲ್ಲದ ಕಾರಣ 1,693 ಕಾರ್ಡ್ ರದ್ದು ಮಾಡಲಾಗಿದೆ.
ಕಾರ್ಡ್‌ದಾರರಿಗೆ ಏನು ಸೌಲಭ್ಯ?: ಗಂಗಾವತಿ ಗ್ರಾಮೀಣ ಪ್ರದೇಶದಲ್ಲಿ 107 ನ್ಯಾಯಬೆಲೆ ಅಂಗಡಿಗಳಿದ್ದು, ನಗರದಲ್ಲಿ 24 ಅಂಗಡಿಗಳಿವೆ. ಈಗ ಈ ಅಂಗಡಿಗಳ ವ್ಯಾಪ್ತಿಯಲ್ಲಿನ ಪಡಿತರ ಚೀಟಿಗಳು ರದ್ದಾಗಿರುವುದರಿಂದ ಕಾರ್ಡ್‌ದಾರರ ಪಡಿತರ ಎಲ್ಲಿ ಹೋಗುತ್ತದೆ ಎಂಬ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.
ದೊರೆಯದ ಸೌಲಭ್ಯ: ಬಿಪಿಎಲ್ ಕಾರ್ಡ್‌ಗಳು ನಿಜವಾದ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಸಧೃಢರಾದವರ ಕೈಯಲ್ಲಿ ಬಿಪಿಎಲ್ ಕಾರ್ಡ್‌ಗಳಿವೆ. ಗುಡಿಸಲು ವಾಸಿಗಳಿಗೆ ಮತ್ತು ತೀರಾ ಹಿಂದುಳಿದ ಜನಾಂಗಕ್ಕೆ ಈ ಸೌಲಭ್ಯ ಇಲ್ಲದ ಕಾರಣ ಪಡಿತರಕ್ಕಾಗಿ ಪರದಾಡುವಂತಾಗಿದೆ. ಶ್ರೀಮಂತರ ಕೈಯಲ್ಲಿದ್ದ ಕಾರ್ಡ್‌ಗಳನ್ನು ಕೆಲವರು ಪಡೆದು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂಬ ಅರೋಪ ಇವೆ. ಅಲ್ಲದೆ ಸೀಮೆಎಣ್ಣೆ ಖರೀದಿಸಿ ಲಾರಿಗಳಿಗೆ ಮಾರಾಟ ಮಾಡುವ ಗುಂಪು ಇದ್ದು, ಇದರಿಂದ ಕಾರ್ಡ್‌ಗಳ ದುರಪಯೋಗಕ್ಕೆ ಕಾರಣವಾಗಿದೆ.
ಕೇಂದ್ರಗಳ ಸ್ಥಗಿತ: ಗಂಗಾವತಿ ನಗರದಲ್ಲಿ ಖಾಸಗಿ ಕೇಂದ್ರಗಳನ್ನು ಪ್ರಾರಂಭಿಸಿ, ಪಡಿತರ ಚೀಟಿಗಳನ್ನು ವಿತರಿಸಲು ಆಹಾರ ಇಲಾಖೆ ಅನುಮತಿ ನೀಡಿ ನಂತರ ಸ್ಥಗಿತಗೊಳಿಸಿತು. ಈ ಹಿಂದೆ ಈ ಕೇಂದ್ರಗಳಲ್ಲಿ ಚೀಟಿ ಪಡೆದವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡದೆ ಇರುವುದರಿಂದ ಕೇಂದ್ರಗಳಿಗೆ ಕಾರ್ಡ್‌ದಾರರು ಅಲೆದಾಡುತ್ತಿದ್ದಾರೆ. ಆದರೆ ಆ ಕೇಂದ್ರಗಳು ರದ್ದಾಗಿರುವುದರಿಂದ ವಂಚಿತರಾದ ಕಾರ್ಡ್‌ದಾರರು ಮನೆಯಿಂದ ತಹಸೀಲ್ದಾರ್ ಕಚೇರಿಗೆ ಪರದಾಡುತ್ತಿದ್ದಾರೆ. ಆದರೆ ಅಲ್ಲಿರುವ ಸಿಬ್ಬಂದಿ ಸರಿಯಾದ ಮಾಹಿತಿ ನೀಡದ ಕಾರಣ ಅನೇಕರು ಆಹಾರ ಇಲಾಖೆ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಪರಿಶೀಲನೆಗೆ ತಂಡ: ನಿಜವಾದ ಫಲಾನುಭವಿಗಳಿಗೆ ಪಡಿತರ ಚೀಟಿ ದೊರೆಯದೆ ಉಳ್ಳವರ ಪಾಲಾದ ಕಾರ್ಡ್‌ಗಳ ಪರಿಶೀಲನೆಗೆ ಆಹಾರ ಇಲಾಖೆ ತಂಡ ರಚಿಸಿದೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ ನಜೀರಸಾಬ್ ತಿಳಿಸಿದ್ದಾರೆ. ವಾರ್ಡ್ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ನಿಜವಾದ ಫಲಾನುಭವಿಗಳನ್ನು ಪತ್ತೆಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಸರಿಯಾದ ದಾಖಲಾತಿ ನೀಡಿ ಪಡಿತರ ಚೀಟಿ ಪಡೆದರೆ ಕಾರ್ಡ್ ರದ್ದಾಗದೆ ಸಮರ್ಪಕವಾಗಿ ಪಡಿತರ ಪಡೆಯಲು ಅನುಕೂಲವಾಗುತ್ತದೆ ಎಂಬುದು ಇಲಾಖೆ ಅಭಿಪ್ರಾಯ.


-ರಾಮಮೂರ್ತಿ ನವಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!