ಕೊಪ್ಪಳ

ಅಕ್ರಮ ನೀರಾವರಿಗೆ ಬ್ರೇಕ್

ಕನ್ನಡಪ್ರಭ ವಾರ್ತೆ, ಕಾರಟಗಿ, ಜು. 1
ತುಂಗಭದ್ರಾ ಎಡದಂಡೆ ನಾಲೆಯ 31ನೇ ವಿತರಣಾ ನಾಲೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುವ ನೀರಾವರಿಗೆ ಸಂಪೂರ್ಣ ಕಡಿವಾಣ ಹಾಕುವುದಾಗಿ ನೀರಾವರಿ ಇಲಾಖೆಯ ಇಇ ಮೋತಿಲಾಲ್ ಹೇಳಿದರು.
ತುಂಗಭದ್ರಾ ಎಡದಂಡೆ ನಾಲೆಯ 31ನೇ ವಿತರಣಾ ನಾಲೆಯ ಕೆಳ ಭಾಗದ ಬೂದುಗುಂಪಾ, ತಿಮ್ಮಾಪುರ, ಶೇಷಗಿರಿಕ್ಯಾಂಪ್, ಚನ್ನಹಳ್ಳಿ, ಸಿದ್ರಾಂಪುರ, ಮಾವಿನಮಡ್ಗು, ಮುಕ್ಕುಂದಾ, ಲಕ್ಷ್ಮೀ ಕ್ಯಾಂಪ್, ಯರಡೋಣಾ, ಉಳೇನೂರು, ಉಳೇನೂರು ಕ್ಯಾಂಪ್ ಸೇರಿ ಒಟ್ಟು 18 ಗ್ರಾಮಗಳ ರೈತರು ಅಕ್ರಮ ನೀರಾವರಿಗೆ ಕಡಿವಾಣ ಹಾಕಬೇಕು ಹಾಗೂ 31ನೇ ವಿತರಣಾ ನಾಲೆಯ ವ್ಯಾಪ್ತಿಯ ರೈತರಿಗೆ ನಿಗದಿಪಡಿಸಿದ ಸಮಯಕ್ಕೆ ಕಾಲುವೆಗೆ  ನೀರು ಹರಿಸಬೇಕು ಎಂದು ಮಂಗಳವಾರ ಪಟ್ಟಣದ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಕೆಳ ಭಾಗಕ್ಕೆ ಸಮರ್ಪಕ ನೀರು ಪೂರೈಕೆಗೆ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಕ್ರಮವಾಗಿ ಕಾಲುವೆ ನೀರು ಪಡೆಯುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವುದರೊಂದಿಗೆ ಅಕ್ರಮ ನೀರಾವರಿಗೆ ಬಳಸಿದ ಪೈಪ್, ಮೋಟಾರ್‌ಗಳನ್ನು ಕಿತ್ತು ಇಲಾಖೆಯ ಸುಪರ್ದಿಗೆ ಪಡೆಯಲಾಗುವುದು. ಉಪ ಕಾಲುವೆಗಳಿಗೆ ನೀರು ಪೂರೈಕೆಗೆ ಅನೂಕುಲವಾಗುವ ನಿಟ್ಟಿನಲ್ಲಿ ಗೇಜ್ ಅಳವಡಿಸಲಾಗುವುದು. ಇದರಿಂದ ಯಾವ ಭಾಗದ ಯಾವ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. ರಾಜೀವ್ ಗಾಂಧಿ ಸಬ್‌ಮಿಷನ್ ಕುಡಿವ ನೀರಿನ ಯೋಜನೆಯ ಕೆರೆಗೆ 31ನೇ ವಿತರಣಾ  ನಾಲೆಯಿಂದ ನೀರು ಸಂಗ್ರಹಿಸಲಾಗುತ್ತಿದೆ ಎಂಬ ವಿಷಯ ರೈತರಿಂದ ತಿಳಿದು ಬಂದಿದ್ದು, ಈ ಯೋಜನೆಗೆ ನದಿ ಅಥವಾ ಹಳ್ಳದಿಂದ ಶಾಶ್ವತ ನೀರು ಪಡೆಯಬೇಕೆಂಬ ಸರ್ಕಾರದ ಆದೇಶವಿದೆ. ಡಿಸ್ಟ್ರಿಬ್ಯೂಟರ್ ಮೂಲಕ ನೀರು ಪಡೆಯುವಂತಿಲ್ಲ. ಮುಖ್ಯ ನಾಲೆ ಮೂಲಕ ಯೋಜನೆಗೆ ನೀರು ಪಡೆಯಬಹುದು. ಪಡೆಯುವಂತೆ ಸೂಚಿಸಲಾಗುವುದು. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ ಮಾತನಾಡಿ, ಬೂದುಗುಂಪಾ, ತಿಮ್ಮಾಪುರ, ಶೇಷಗಿರಿ ಕ್ಯಾಂಪ್, ರಾಜಕ್ಯಾಂಪ್, ಚನ್ನಹಳ್ಳಿ, ಸಿದ್ರಾಂಪುರ, ಮಾವಿನಮಡ್ಗು, ಮುಕ್ಕುಂದಾ, ಲಕ್ಷ್ಮೀ ಕ್ಯಾಂಪ್, ಯರಡೋಣಾ, ಉಳೇನೂರು, ಉಳೇನೂರು ಕ್ಯಾಂಪ್ ಸೇರಿದಂತೆ ಒಟ್ಟು 18 ಗ್ರಾಮಗಳ ರೈತರು ಜೂನ್ 24ರಂದು ಸಮೀಪದ ಹಾಲಸಮುದ್ರ ಗ್ರಾಮದಲ್ಲಿ ಸಭೆ ನಡೆಸಿ, ವಲಸಿಗರ ಮತ್ತು ಪ್ರಭಾವಿಗಳಿಂದ ನಿರಂತರ, ನಿರಾತಂಕವಾಗಿ ನಡೆಯುತ್ತಿರುವ ಅಕ್ರಮ ನೀರಾವರಿಯನ್ನು ಸಂಪೂರ್ಣ ತಡೆಗಟ್ಟಬೇಕು. ಅಕ್ರಮ ನೀರಾವರಿಗೆ ಅಣಿಯಾದವರಿಗೆ ತಕ್ಕಪಾಠ ಕಲಿಸಬೇಕು. 31ನೇ ವಿತರಣಾ ನಾಲೆಯ ಮೇಲ್ಭಾಗದಲ್ಲಿ ಸುಮಾರು 1200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅಕ್ರಮ ನೀರಾವರಿ ಭೂಮಿ ನಿರ್ಮಾಣವಾಗಿದೆ. ಈ ಬಾರಿ ಮೊದಲಿಗೆ ಕೆಳಭಾಗದ ಎಲ್ಲ ನೀರಾವರಿ ರೈತರಿಗೆ ನೀರು ತಲುಪಿದ ನಂತರವೇ ಮುಂದಿನ ನಿರ್ಧಾರವಾಗಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಐದು ವರ್ಷಗಳಿಂದ ದಾಖಲೆಗಳಲ್ಲಿ ನೀರಾವರಿ ಹೊಂದಿರುವ ರೈತರು ನೀರಿಗಾಗಿ ಪರಿತಪಿಸಬೇಕಾಗಿದೆ. ಈ ಬಾರಿ ಆ ರೀತಿಯಾಗದಂತೆ ನೋಡಿಕೊಳ್ಳಬೇಕು. ಹಾಡುಹಗಲೆ ಅಕ್ರಮ ನೀರಾವರಿ ಮಾಡಿದವರು ಕಾಲುವೆಗಳಲ್ಲಿ ನೀರು ಕದಿಯುತ್ತಾರೆ. ಇನ್ನು ಹಲವರು ಬೃಹತ್ ಅಕ್ರಮ ಕೆರೆ ನಿರ್ಮಿಸಿಕೊಂಡಿದ್ದಾರೆ. ಕೆಲವರು ಕಾಲುವೆಗಳಿಗೆ ಪೈಪ್‌ಲೈನ್ ಹಾಕಿಕೊಂಡಿದ್ದರೂ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಅಕ್ರಮ ನೀರಾವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಬಾರಿ ಅಕ್ರಮ ನೀರಾವರಿಗೆ ಶಾಶ್ವತ ಕಡಿವಾಣ ಹಾಕಲೇಬೇಕು.
ಕಳೆದ ವಾರ ಈ ವಿಷಯದ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ನೀರಾವರಿ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇನ್ನುಮುಂದೆ ಅಧಿಕಾರಿಗಳು ಅಕ್ರಮ ನೀರಾವರಿ ತಡೆಗಟ್ಟದಿದ್ದರೆ ಕೆಳಭಾಗದ ಎಲ್ಲ ನೂರಾರು ರೈತರು ಬೀದಿಗಿಳಿದು ಪ್ರತಿಭಟನೆಗೆ ಇಳಿಯುವುದಾಗಿ ರೈತರು ತೀರ್ಮಾನಿಸಿದ್ದೇವೆ. ನಾಗನಕಲ್ ಗ್ರಾಮದಲ್ಲಿ ನಿರ್ಮಾಣಗೊಂಡ   ನೂರಾರು ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡುವ ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆ ಕೆರೆಗೆ 31ನೇ ವಿತರಣಾ ನಾಲೆಯಿಂದ ನೀರು ಸಂಗ್ರಹಿಸಲಾಗುತ್ತಿದೆ. ಇನ್ನುಮುಂದೆ ನಮ್ಮ ಪಾಲಿಗೆ ಹರಿಯುವ ನೀರನ್ನು ಆ ಕೆರೆಗೆ ಹರಿಸುವುದನ್ನು ನಿಲ್ಲಿಸಬೇಕು. ಸಿಂಧನೂರು ಸೇರಿದಂತೆ ಇನ್ನಿತರ ಕಡೆ ಎಡದಂಡೆ ಮುಖ್ಯ ನಾಲೆಯಿಂದ ಕೆರೆ ಸಂಗ್ರಹಕ್ಕೆ ನೀರು ಪಡೆಯಲಾಗುತ್ತಿದೆ. ಅದೇ ರೀತಿ ಇಲ್ಲಿಯೂ ಮುಖ್ಯ ನಾಲೆಯಿಂದ ಕುಡಿವ ನೀರಿನ ಯೋಜನೆಗೆ ನೀರು ಸಂಗ್ರಹಿಸಬೇಕು. 31/2 ಮತ್ತು 31/3ರಲ್ಲಿ ಆ ಕಾಲುವೆಗಳಲ್ಲಿ ಅಳತೆಗಿಂತ ಹೆಚ್ಚಿನ ಗೇಜ್ ನೀರನ್ನು ಹರಿಬಿಡುವ ಪದ್ಧತಿ ಇದೆ. ಶೇ. 30ರಷ್ಟು ನೀರು ಈ ಕಾಲುವೆ ಮೂಲಕ ಅಕ್ರಮ ನೀರಾವರಿಗೆ ಹೋಗುತ್ತದೆ. ಈ ಪದ್ಧತಿ ಮೊದಲು ನಿಲ್ಲಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳು ಕಾಲುವೆಗಳನ್ನು ವೀಕ್ಷಣೆ ಮಾಡಿದರು. ರೈತರು ಅಕ್ರಮ ನೀರಾವರಿ ನಡೆಯುವ ಸ್ಥಳ ಅಧಿಕಾರಿಗಳಿಗೆ ತೋರಿಸಿದರು. ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ, ದೊಡ್ಡಬಸಪ್ಪ, ರುದ್ರಪ್ಪ ಅಥಣಿ, ಬಸವಣ್ಣೆಯ್ಯ ಸ್ವಾಮಿ, ಮಲ್ಲನಗೌಡ, ಭೀಮನಗೌಡ ಕಂಡ್ರಿ, ಬಸವರಾಜ ಪೊಲೀಸ್‌ಪಾಟೀಲ್, ನಾಗನಗೌಡ, ಮಲ್ಲನಗೌಡ, ಚಿಟ್ಟಿಬಾಬು ದೇವಿ ಕ್ಯಾಂಪ್ ಸಿಂಗನಗೌಡ, ಶರಣಪ್ಪ, ಮಲ್ಲಯ್ಯ ಕುಲಕರ್ಣಿ, ವಿರೂಪಾಕ್ಷ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ