ಕೊಪ್ಪಳ

ನ್ಯಾಪ್‌ಕಿನ್ ವಿತರಣೆ ವಿಳಂಬ: ತರಾಟೆ

ಕನ್ನಡಪ್ರಭ ವಾರ್ತೆ, ಯಲಬುರ್ಗಾ, ಜು. 18
ಪ್ರತಿ ತಿಂಗಳು ಮಕ್ಕಳು ಶಾಲೆಗೆ ಬರಲು ತೊಂದರೆಯಾಗದಿರಲೆಂದು ಸರ್ಕಾರ ನ್ಯಾಪ್‌ಕಿನ್ ವಿತರಿಸುತ್ತಿದೆ. ಆದರೆ ಅವುಗಳು ಆರೋಗ್ಯ ಇಲಾಖೆಗೆ ಬಂದು ಎರಡು ತಿಂಗಳಾದರೂ ಶಿಕ್ಷಣಾಧಿಕಾರಿ ಬಸವರಾಜಯ್ಯ ಸ್ವಾಮಿ, ಸಿಡಿಪಿಒ ಜಯದೇವಿ ಮಕ್ಕಳಿಗೆ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ತಾಪಂ ಅಧ್ಯಕ್ಷೆ ಮಹಾದೇವಿ ಕಂಬಳಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಶಿಶು ಅಭಿವೃದ್ಧಿ ಇಲಾಖೆ ತಾಲೂಕಾಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಾದ ನೀವುಗಳು ಆರೋಗ್ಯ ಇಲಾಖೆಗೆ ಬಂದ ಈ ನ್ಯಾಪ್‌ಕಿನ್‌ಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ಪ್ರಶ್ನಿಸಿದರು. ಆಗ ಶಿಕ್ಷಣಾಧಿಕಾರಿ ಹಾಗೂ ಸಿಡಿಪಿಒ ಉತ್ತರಿಸಿ, ನಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಸಬೂಬು ಹೇಳುತ್ತಿದ್ದಂತೆಯೇ ತಾಲೂಕು ವೈದ್ಯಾಧಿಕಾರಿ ಪ್ರಶಾಂತ್ ಬಾಬು ಪ್ರತಿಕ್ರಿಯಿಸಿ, ಮೇಡಂ ಇವರಿಗೆ ಬರೆದ ಮಾಹಿತಿ ಪತ್ರ ಇದೆ. ಇವರು ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ. ನಾನು ಬರೆದ ಪತ್ರದ ದಾಖಲೆ ಇವೆ ಎನ್ನುತ್ತಿದ್ದಂತೆಯೇ ಬಿಇಒ, ಆಯಿತು ಇನ್ನು ಒಂದೆರೆಡು ದಿನಗಳಲ್ಲಿ ಪ್ಯಾಡ್‌ಕಿಟ್‌ಗಳನ್ನು ಪಡೆದು ಶಾಲಾವಾರು ವಿತರಣೆ ಮಾಡುವುದಾಗಿ ಹೇಳಿದರು. ಇನ್ನು ಸಿಡಿಪಿಒ ಜಯದೇವಿ, ಮಾಹಿತಿ ಬಂದಿದ್ದರೂ ಬಂದಿಲ್ಲ ಎಂದು ಸುಳ್ಳು ಹೇಳಿದ್ದಕ್ಕೆ ಕ್ಷಮೆ ಕೋರಿ ನಾಳೆಯೇ ನಮ್ಮ ಸಿಬ್ಬಂದಿಗೆ ಅವುಗಳನ್ನು ತರಲು ಸೂಚಿಸಿ ಕಿಶೋರಿಯರಿಗೆ ವಿತರಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿ ತುಕಾರಾಂ ಮಾತನಾಡಿ, ಬೆಳೆ ವಿಮೆ ತುಂಬಿಸಿಕೊಳ್ಳಲು ಕೆಲ ಬ್ಯಾಂಕ್ ಅಧಿಕಾರಿಗಳು ನಮಗೆ ವಿಮೆ ತುಂಬಿಸಿಕೊಳ್ಳಲು ಯಾವುದೇ ಆದೇಶ ಬಂದಿಲ್ಲ ಎಂದು ರೈತರಿಂದ ವಿಮೆ ಅರ್ಜಿ ಸ್ವಿಕರಿಸುತ್ತಿಲ್ಲ ಎಂಬ ಆರೋಪ ಪತ್ರಿಕೆಗಳಲ್ಲಿ ಬಂದಿದೆ. ಆದರೆ ಈಗಾಗಲೇ ಎಲ್ಲ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿದ್ದು, ರೈತರು ಯಾವ ಆತಂಕವಿಲ್ಲದೇ ಜು. 30ರ ವರೆಗೆ ಬೆಳೆ ವಿಮೆ ತುಂಬಲು ಮುಕ್ತ ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.
ತಾಲೂಕಿನ ವಿವಿಧ ಭಾಗದಲ್ಲಿ ಮಾರ್ಚ್‌ನಲ್ಲಿ ಆಲಿಕಲ್ಲು ಮಳೆಯಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಬೆಳೆಹಾನಿ ಪರಿಹಾರ ಮಂಜೂರು ಮಾಡಿದ್ದು, ಸದ್ಯದಲ್ಲೇ ವಿತರಿಸಲಾಗುವುದು ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಮಲ್ಲನಗೌಡ ಕೊನಗೌಡ್ರ, ಸಂಗಪ್ಪ ಬಂಡಿ, ಪ್ರಭುರಾಜ ಹವಾಲ್ದಾರ, ನಮ್ಮ ಭಾಗಗಳಲ್ಲೂ ಆಲಿಕಲ್ಲು ಮಳೆ ಸುರಿದು ಬೆಳೆ ಹಾನಿಯಾಗಿದೆ. ಇದಕ್ಕೆ ಏಕೆ ಪರಿಹಾರವಿಲ್ಲ ಎಂದು ಪ್ರಶ್ನಿಸಿದರು. ಆಗ ತುಕಾರಾಂ, ಕಂದಾಯ ಇಲಾಖೆಯವರು ಆಲಿಕಲ್ಲಿನಿಂದ ಬೆಳೆ ಹಾನಿಯಾದ ಬಗ್ಗೆ ವರದಿ ನೀಡಿದ್ದಾರೆ. ಅದನ್ನೇ ಸರ್ಕಾರಕ್ಕೆ ಕಳುಹಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ವರದಿ ಒಪ್ಪಿಸಿದರು. ತಾಪಂ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!