ಕೊಪ್ಪಳ

ಕೋಟಿ ಸುರಿದರೂ ತಪ್ಪದ ಧೂಳು

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜೂ. 20
ಕೊಪ್ಪಳ ನಗರಸಭೆಯ ನಗರೋತ್ಥಾನ ಅಭಿವೃದ್ಧಿ ಯೋಜನೆಯಡಿ ಒಳಚರಂಡಿ ಕಾಮಗಾರಿ(ಯುಜಿಡಿ) ಕೈಗೊಳ್ಳುವುದಕ್ಕೆ ಸರ್ಕಾರದಿಂದ ರು. 30 ಕೋಟಿ ಅನುದಾನ ಬಿಡುಗಡೆಯಾಗಿದೆ. ಅನುದಾನ ಬಿಡುಗಡೆಯಾಗಿ ಎರಡು ವರ್ಷ ಗತಿಸಿದರೂ ಚರಂಡಿ ಕಾಮಗಾರಿ ಮುಗಿಸಲು ಲೋಕೋಪಯೋಗಿ ಇಲಾಖೆ ಸಹಿತ ಇತರ ಇಲಾಖೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇವರ ಬೇಜವಾಬ್ದಾರಿತನಕ್ಕೆ, ನಗರಸಭೆಯ ನಿಧಾನಗತಿಯ ಆಡಳಿತಕ್ಕೆ ಜನ ಛೀ....ಥೂ... ಎನ್ನುವಂತಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಬಹುತೇಕ ವಾರ್ಡ್‌ಗಳಲ್ಲಿ ನಗರಸಭೆ ವತಿಯಿಂದ 2011ರಲ್ಲಿಯೇ ಒಳ ಚರಂಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿ ತೆವಳುತ್ತಾ ಸಾಗುತ್ತಿರುವುದಕ್ಕೆ ಜನ ಆಕ್ರೋಶ ಪಡುವಂತಾಗಿದೆ. ಯುಜಿಡಿ ಕಾಮಗಾರಿ ನಡೆದ ವಾರ್ಡ್‌ಗಳಿಗೆ ಕನ್ನಡಪ್ರಭ ತೆರಳಿದಾಗ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಾರ್ಡಿನಲ್ಲಿ ಕಾಮಗಾರಿ ಮಾಡಿ ಅರ್ಧಕ್ಕೆ ಬಿಡಲಾಗಿದೆ. ಮತ್ತೆ ಈ ಕಡೆ ತಲೆ ಹಾಕಿಲ್ಲ. ಕಾಮಗಾರಿ ಮಾಡಿ ಅರೆಬರೆ ಮಣ್ಣು ಹಾಕಲಾಗಿದೆ. ಇದರಿಂದ ಜನ ಸಂಚರಿಸಲು ಭಯ ಪಡುವಂತಾಗಿದೆ. ಈ ಕುರಿತು ಈಗಾಗಲೇ ನಗರಸಭೆ ಸದಸ್ಯರಿಗೆ ಹಲವು ಭಾರಿ ಮೌಖಿಕವಾಗಿ ತಿಳಿಸಿದ್ದರೂ ಈ ಬಗ್ಗೆ ಯಾವೊಬ್ಬ ಸದಸ್ಯರು ಕಿಂಚಿತ್ತೂ ಗಮನ ನೀಡುತ್ತಿಲ್ಲ ಎನ್ನುವ ಆಕ್ರೋಶದ ಮಾತುಗಳೇ ಕನ್ನಡಪ್ರಭಕ್ಕೆ ಕೇಳಿ ಬಂದವು.
ಇನ್ನು ಸಂಬಂಧಿಸಿದ ಅಧಿಕಾರಿಗೆ ಮನವಿ  ಸಲ್ಲಿಸಬಹುದಲ್ಲ ಎಂದು ಹೇಳಿದರೆ, ಅಧಿಕಾರಿ ವರ್ಗದ ಚರ್ಮ ತುಂಬಾ ದಪ್ಪವಾಗಿದೆ. ನಗರಸಭೆ ಸದಸ್ಯರ ಮಾತುಗಳನ್ನೆ ಕೇಳದ ಅಧಿಕಾರಿಗಳು ಇನ್ನು ಸಾಮಾನ್ಯ ಜನರ ಸಮಸ್ಯೆ ಕೇಳುವರೆ ಎಂದು ಮರು ಪ್ರಶ್ನಿಸಿದರು.
ಹೆದ್ದಾರಿ ಹಣೆ ಬರಹ ಹರೋ ಹರ: ಕೊಪ್ಪಳದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ಕಾಮಗಾರಿ ಸ್ಥಿತಿ ಯಾರೂ ಕೇಳುವಂತಿಲ್ಲ, ಹೇಳುವಂತೆಯೂ ಇಲ್ಲ. ಸದ್ಯ ಈಗಿರುವ ಹೆದ್ದಾರಿ ರಸ್ತೆ ಗ್ರಾಮೀಣ ಪ್ರದೇಶದ ಕಚ್ಚಾ ರಸ್ತೆಗಿಂತಲೂ ಕಡೆಯಾಗಿದೆ. ಈ ರಸ್ತೆಯಲ್ಲಿ ಅದೆಷ್ಟೋ ಜನ ಬಿದ್ದು ಗಾಯಗೊಂಡಿದ್ದಾರೆ. ವರ್ಷದ ಹಿಂದಷ್ಟೆ ತುಂಡು ಗುತ್ತಿಗೆಯಲ್ಲಿ ರಾ.ಹೆ. 63ರ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ನಗರಸಭೆ ಒಳ ಚರಂಡಿ ಕಾಮಗಾರಿ ಪ್ರಾರಂಭಿಸಿ ಈ ಮೊದಲು ಮಾಡಿದ ರಸ್ತೆಯನ್ನೆಲ್ಲ ಕಿತ್ತು ಹಾಕಲಾಗಿದೆ. ನಗರದ ಹೆದ್ದಾರಿ ರಸ್ತೆಯ ಉದ್ದಕ್ಕೂ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕೇವಲ ಒಂದೇ ಕಡೆ ಜನ ಸಂಚಾರ ಮಾಡಬೇಕು. ಈ ರಸ್ತೆ ಧೂಳಿನಿಂದ ಆವೃತವಾಗಿದೆ. ಜನ ಮೂಗು ಮುಚ್ಚಿಕೊಂಡೆ ಓಡಾಡುವ ಸ್ಥಿತಿ ಎದುರಾಗಿದೆ. ಇನ್ನು ಹೆದ್ದಾರಿ ರಸ್ತೆಯಲ್ಲಿ ಉಸಿರಾಟದ ತೊಂದರೆ ಇರುವ ವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ಓಡಾಡುವಂತಿಲ್ಲ.
ಇನ್ನು ಗವಿಸಿದ್ದೇಶ್ವರ ಜಾತ್ರೆ ನಿಮಿತ್ತ ಕುಷ್ಟಗಿ ರಸ್ತೆಯಿಂದ-ಗವಿಮಠ ವರೆಗೆ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಈಗ ಮತ್ತೆ ಯುಜಿಡಿ ನೆಪದಲ್ಲಿ ಇದ್ದ ಶುದ್ಧ ರಸ್ತೆ ಕಿತ್ತು ಹಾಕಲಾಗಿದೆ. ಇರುವ ಕಿರಿದಾದ ಸ್ಧಳದಲ್ಲಿಯೇ ಪ್ರಯಾಣಿಕರು ಸಂಚಾರ ಮಾಡುವ ದುಸ್ಥಿತಿ ಎದುರಾಗಿದೆ.
ಹೊರ ಜಿಲ್ಲೆ, ವಿವಿಧ ರಾಜ್ಯಗಳಿಂದ ಬರುವ ಪ್ರಯಾಣಿಕರು, ನಗರದ ಸ್ಥಿತಿಗತಿ ನೋಡಿ ಛಿ...ಥೂ...ಎನ್ನುವಂತಾಗಿದೆ. ಕೊಪ್ಪಳ ನಗರದ ಗವಿಶ್ರೀ ನಗರ, ಸಿಂಪಿ ಲಿಂಗಣ್ಣ ರಸ್ತೆ, ಗಾಂಧಿ ನಗರ, ಬಸವೇಶ್ವರ ನಗರ,ದೇವರಾಜ ಅರಸು ಕಾಲೋನಿ, ಬಿ.ಟಿ. ಪಾಟೀಲ್ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಇದೇ ಸಮಸ್ಯೆ ಈಗಲೂ ಕಾಡುತ್ತಿದೆ.
ಶಾಸಕರು, ಅಧಿಕಾರಿಗಳು ಮಾತ್ರ ನಿಧಾನಗತಿ ಕಾಮಗಾರಿ ಏಕೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಯನ್ನೆ ಮಾಡುತ್ತಿಲ್ಲ. ಕನಿಷ್ಠ ಕಾಮಗಾರಿ ನಿಧಾನಗತಿಗೆ ಕಾರಣವೇನು ಎನ್ನುವ ಕುರಿತು ಪರಿಶೀಲನೆ ಮಾಡುವುದು ತುಂಬಾ ವಿರಳವಾಗಿದೆ.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಹೇಳುವ ಶಾಸಕರು ಕೊಪ್ಪಳದಲ್ಲಿ ಅತ್ಯಂತ ನಿಧಾನಗತಿಯಲ್ಲಿ ಯುಜಿಡಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಏಕೆ ಮುಂದಾಗುತ್ತಿಲ್ಲ ಎನ್ನುವ ನೂರಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕಾಡುತ್ತಿವೆ.
ಕ್ರಿಮಿನಲ್ ಪ್ರಕರಣ ಏನಾಯ್ತು ಶಾಸಕರೆ?: ಯುಜಿಡಿ ಕಾಮಗಾರಿ ಕುರಿತು ಈ ಹಿಂದೆ ಶಾಸಕ ರಾಘವೇಂದ್ರ ಹಿಟ್ನಾಳ್ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ನಿಧಾನಗತಿ ಹಾಗೂ ಕಳಪೆ ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಖಡಕ್ಕಾಗಿ ಹೇಳಿದ್ದರು. ಕೇವಲ ಸಭೆಯಲ್ಲಿ ಶಾಸಕರು ಗರ್ಜಿಸಿದರಷ್ಟೆ ಸಾಲದು. ನಗರದ ಸ್ಥಿತಿಗತಿ ನೋಡಿ ಕ್ರಮ ಕೈಗೊಳ್ಳುತ್ತಿಲ್ಲವೇ? ಶಾಸಕರು ಈ ವಿಷಯ ಮರೆತರೇ? ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಶಿಫಾರಸು ಮಾಡಲು ಮನಸ್ಸು ಬರುತ್ತಿಲ್ಲವೆ? ಜಿಡ್ಡುಗಟ್ಚಿದ ಆಡಳಿತ ವೈಖರಿಗೆ ಶಾಸಕರು ಬಿಸಿ ಮುಟ್ಟಿಸುತ್ತಿಲ್ಲವೇಕೆ ಎನ್ನುವ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಇದಕ್ಕೆ ಶಾಸಕರೇ ಉತ್ತರ ನೀಡಬೇಕಿದೆ.
- ದತ್ತು ಕಮ್ಮಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!