ಪಾಂಡವಪುರ: ಶಾಸಕ ಪುಟ್ಟರಾಜು ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಭವಿಷ್ಯ ನುಡಿದರು.
ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ನಡೆದ ಪುಟ್ಟರಾಜು ಅವರ ಅಭಿನಂದನಾ ಸಮಾರಂಭ ಹಾಗೂ ಟಿ.ಎಸ್. ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಎಲ್ಲಾ ವರ್ಗದ ಜನತೆಯ ಪ್ರೀತಿ ಪಾತ್ರರಾಗಿದ್ದಾರೆ ಎಂದರು.
ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರು ಶಾಸಕರಾಗಿ 60 ತಿಂಗಳು ಕೆಲಸ ಮಾಡಿದ್ದಾರೆ. ಅವರ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಎಷ್ಟು, ಶಾಸಕ ಸಿ.ಎಸ್. ಪುಟ್ಟರಾಜು ಕಾಲದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸದ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹಿಸಿದರು.
ಕೆಂಚನಹಳ್ಳಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಎಸ್. ಪುಟ್ಟರಾಜು, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಮಾಡಲು ಮುಂದಾಗಿದ್ದೇನೆ. ಅದರೆ, ರಾಜ್ಯದ ಯಾವುದೇ ಕ್ಷೇತ್ರಗಳಲ್ಲಿಯೂ ಶಾಸಕರು ಮಾಡುವ ಅಭಿವೃದ್ಧಿ ಕೆಲಸಗಳಿಗೆ ಯಾರೂ ಅಡ್ಡಿಪಡಿಸುತ್ತಿಲ್ಲ. ಆದರೆ, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಪುಟ್ಟಣ್ಣಯ್ಯ ರಾಜಕೀಯ ದ್ವೇಷವನ್ನಿಟ್ಟುಕೊಂಡು ತೊಡರುಗಾಲು ಹಾಕಲು ಮುಂದಾಗಿದ್ದಾರೆ ಎಂದು ಭಾವುಕರಾಗಿ ನುಡಿದರು.
ಮಾಜಿ ಶಾಸಕ ಎಚ್.ಬಿ.ರಾಮು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಟ್ಟರಾಜು ಜನಪರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುಟ್ಟಣ್ಣಯ್ಯ ಮಾತಿನ ಮಲ್ಲ. ಕೆಲಸ ಮಾಡುವ ವ್ಯಕ್ತಿಯಲ್ಲ. ದುದ್ದ ಹೊಬಳಿಯಲ್ಲಿ ಪುಟ್ಟರಾಜು ಅವರಿಗೆ ಕಳೆದ ಸಾಲಿಗಿಂತ ಹೆಚ್ಚಿನ ಮತ ಕೊಡಿಸುತ್ತೇನೆ. ಇಲ್ಲವಾದರೆ ರಾಜಕೀಯದಿಂದ ನಿವೃತ್ತಿ ಯಾಗುತ್ತೇನೆ ಎಂದು ಪುಟ್ಟಣ್ಣಯ್ಯ ಅವರಿಗೆ ಸವಾಲು ಹಾಕಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಜೆ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಂದ ಪುಟ್ಟರಾಜು ಅವರಿಗೆ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾರೋಹಳ್ಳಿ ನಾಗೇಗೌಡ, ಎಪಿಎಂಸಿ ಅಧ್ಯಕ್ಷ ಸಿ.ಎಸ್. ಗೋಪಾಲಗೌಡ, ತಾಪಂ ಸದಸ್ಯ ನಾಗರಾಜುಮೂರ್ತಿ, ಗ್ರಾಪಂ ಸದಸ್ಯರು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ವಿಜೇಂದ್ರ, ಕ್ಯಾತನಹಳ್ಳಿ ಚೇತನ್, ಆದರ್ಶ, ಬಿ.ಟಿ. ನಟರಾಜ್ ಇತರರು ಇದ್ದರು.