ಆದಿಚುಂಚನಗಿರಿ / ಮಂಡ್ಯ: ಆರೋಗ್ಯ, ಅಕ್ಷರ, ಅನ್ನ ದಾಸೋಹಿ ಶಿವೈಕ್ಯ ಜಗದ್ಗುರು ಡಾ.ಬಾಲಗಂಗಾಧನಾಥ ಶ್ರೀಗಳ ಪುಣ್ಯಾರಾಧನೆ ಮಹೋತ್ಸವದ ಸಂತ ಸಂಗಮದಲ್ಲಿ ಭಾರತದ ಶ್ರೇಷ್ಠ ಸಂತರು ಶ್ರೀಗಳ ಸೇವಾ ಕಾರ್ಯವನ್ನು ಸೋಮವಾರ ಕೊಂಡಾಡಿದರು.
ಆದಿಚುಂಚನಗಿರಿಯ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಭಾರತದ 4 ದಿಕ್ಕುಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಸಂತರು, ಋಷಿ ದಿಗ್ಗಜರು, ಪೀಠಾಧ್ಯಕ್ಷರು, ಶ್ರೀಗಳ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವ, ಗುರುಗಳ ಸೇವಾ ಕಾರ್ಯ ಇತ್ಯಾದಿಗಳನ್ನು ತಮ್ಮ ಆಶೀರ್ವಚನ ಕಾರ್ಯಕ್ರಮದಲ್ಲಿ ಕೊಂಡಾಡಿದರು.
ಆದಿಚುಂಚನಗಿರಿಯ ನೂತನ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿದ ಸಂತ ಸಂಗಮ ಕಾರ್ಯಕ್ರಮದಲ್ಲಿ ಪಥಾಂಜಲಿ ಯೋಗಗುರು ಬಾಬಾ ರಾಮ್ದೇವ್, ಗೋರಕ್ಪುರದ ಆದಿತ್ಯಾನಾಥ ಸ್ವಾಮಿ, ಪರಮಾನಂದ ಸರಸ್ವತಿ ಮಹಾಸ್ವಾಮಿಗಳು, ಹರ್ಷವಿದ್ಯಾಪೀಠ ರಾಜ್ಕೋಟ್, ಮುಂಬೈನ ವಿಶ್ವೇಶ್ವರಾನಂದ ಮಹಾರಾಜ್, ಪೇಜಾವರದ ವಿಶ್ವೇಶ್ವರ ತೀರ್ಥ ಶ್ರೀಗಳು, ಸುತ್ತೂರಿನ ದೇಶಿಕೇಂದ್ರ ಮಹಾಸ್ವಾಮಿಗಳು, ಗಣಪತಿ ಸಚ್ಚಿದಾನಂದ ಸ್ವಾಮೀಗಳು, ಸಿರಿಗೆರೆ ತರಳುಬಾಳು ಡಾ. ಶಿವಮೂರ್ತಿಶಿವಚಾರ್ಯ ಸ್ವಾಮಿಗಳು, ಏಜಾಸುದ್ದೀನ್, ಫಾದರ್ ನರೋನಾ ಸೇರಿದಂತೆ ಶತಕ್ಕೂ ಹೆಚ್ಚು ಹರಗುರು ಚರಮೂರ್ತಿಗಳು, ಮೂಡಬಿದರೆಯ ಭಂಡಾರಕ ಚಾರುಕೀರ್ತಿ ಪಂಡಿತಾಚಾರ್ಯ ಸೇರಿದಂತೆ ಸಾಧು ಸಂತರು ಪಾಲ್ಗೊಂಡಿದ್ದರು.
ರಾಜಕೀಯ ನಾಯಕರ ಆಗಮನ: ಸಂತ ಸಂಗಮದಲ್ಲಿ ಕೇವಲ ಋಷಿಮನಿಗಳು, ಸಾಧು- ಸಂತರಿಗೆ ಮಾತ್ರ ಮೊದಲ ದಿನದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದರೂ ವೇದಿಕೆಯಲ್ಲಿ ಅನೇಕ ರಾಜಕಾರಣಿಗಳು ಸುಳಿದಾಡಿದ್ದು ಕಂಡು ಬಂದಿತ್ತು.
ಉಪಮುಖ್ಯಮಂತ್ರಿ ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಚಿತ್ರನಟ ಅಂಬರೀಷ್, ಡಿ.ಬಿ. ಚಂದ್ರೇಗೌಡ, ಕೇಂದ್ರ ಸಚಿವ ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ್, ಶಾಸಕ ಸುರೇಶ್ಗೌಡ, ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ, ಅಧಿಕಾರಿಗಳಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರನಾರಾಯಣ್ ಸೇರಿದಂತೆ ಅನೇಕರು ಬಾಲಗಂಗಾಧರನಾಥ ಶ್ರೀಗಳ ಸಮಾಧಿಗೆ ವಂದನೆ ಸಲ್ಲಿಸಿ ನಂತರ ನೂತನ ಪೀಠಾಧ್ಯಕ್ಷ ನಿರ್ಮಲಾನಂದ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಸಂತರ ಸಂಗಮದಲ್ಲಿ ಉತ್ತರ ಪ್ರದೇಶ, ದೆಹಲಿ, ಆಂಧ್ರ, ತಮಿಳುನಾಡು, ರಾಜಸ್ತಾನ್, ಗುಜರಾತ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸನ್ಯಾಸಿಗಳು ಆದಿಚುಂಚನಗಿರಿಯ ತ್ರಿವಿಧ ದಾಸೋಹಿ, ಅನ್ನ, ಅಕ್ಷರ, ಆರೋಗ್ಯ ನೀಡಿದ ಮಹಾಸಂತ ಶಿರೋಮಣಿ, ಯುಗ ಪುರುಷ, ದಿನದಯಾಳು ಡಾ.ಬಾಲಗಂಗಾಧನಾಥ ಶ್ರೀಗಳಿಗೆ ಭಕ್ತಿ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ವೇದಿಕೆ ಮೇಲೆ ಮತ್ತು ಮುಂಭಾಗ ಸಂತರಿಗಾಗಿ ಪ್ರತ್ಯೇಕ ಆಸನ ಹಾಕಲಾಗಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ಸಂತರಿಗೆ ಸಕಲ ರೀತಿಯ ಉಪಚಾರ ಮಾಡಲಾಯಿತು.
ಸೋಮವಾರ ಬೆಳಗ್ಗೆ 5 ಗಂಟೆ ಕಾಲಭೈರವನಿಗೆ ರುದ್ರಾಭಿಷೇಕ ಮಾಡುವ ಮೂಲಕ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಅಖಂಡ ಭಜನೆ, ಶಿವೈಕ್ಯ ಜಗದ್ಗುರು ಬಾಲಗಂಗಾಧರನಾಥ ಶ್ರೀಗಳಿಗೆ ಪ್ರಿಯವಾದ ಜನಪದ ನೃತ್ಯಗಳ ಪ್ರದರ್ಶನ ಉದ್ಘಾಟಿಸಿದ ನಂತರ ಗುರುಗಳ ಸಮಾಧಿಗೆ ನೂತನ ಪೀಠಾಧ್ಯಕ್ಷರು ಪೂಜೆ ಸಲ್ಲಿಸಿ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಂದರವಾಗಿ ಸಿಂಗರಿಸಲಾಗಿದ್ದ ಶ್ರೀಗಳ ಸಮಾಧಿಗೆ ನಮನ ಸಲ್ಲಿಸಲು ಮಾಜಿ ಮುಖ್ಯಮಂತ್ರಿಗಳು, ಶಾಸಕರು, ಅಧಿಕಾರಿಗಳು ಸೇರಿದಂತೆ ಗಣ್ಯಾತಿ ಗಣ್ಯ ವ್ಯಕ್ತಿಗಳು ಹಾಗೂ ಭಕ್ತಾದಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಸಮಾಧಿಗೆ ನಮನ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಮಜ್ಜಿಗೆ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಭಕ್ತರೆಲ್ಲರಿಗೂ ದಾಸೋಹ ವ್ಯವಸ್ಥೆಯು ಮುಂದುವರಿದಿತ್ತು.
ಶಿವೈಕ್ಯ ಜಗದ್ಗುರು ಬಾಲಗಂಗಾಧರನಾಥರಿಗೆ ಪ್ರಿಯವಾದ ಜನಪದ ಗೀತೆಗಳು, ಭಾವಗೀತೆಗಳನ್ನು ಭಕ್ತರು ಹಾಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಚುಂಚನಗಿರಿ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.