ಮಂಡ್ಯ

ಇಲ್ಲಿ ಗೆದ್ದೋರಿಗೆ ಮಂತ್ರಿ ಪದವಿ ಸಿಕ್ಕೇ ಇಲ್ಲ

ಕನ್ನಡಪ್ರಭ ವಾರ್ತೆ ಮಂಡ್ಯ ಮಾ.29
ಚಿನಕುರಳಿ, ಕಸಬಾ, ಮೇಲುಕೋಟೆ ಹಾಗೂ ಮಂಡ್ಯ ತಾಲೂಕಿನ ದುದ್ದ ಹೋಬಳಿಯನ್ನು ಒಳಗೊಂಡಿದ್ದ ಪಾಂಡವಪುರ 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಮೇಲುಕೋಟೆ ಕ್ಷೇತ್ರವಾಗಿ ನಾಮಕರಣಗೊಂಡಿತು.
1952 ರಿಂದ 2008ರವರೆಗೆ 13 ವಿಧಾನಸಭಾ ಚುನಾವಣೆಗಳಲ್ಲಿ 9 ಮಂದಿ ಶಾಸಕರಾಗಿದ್ದು, ಒಂದೇ ಒಂದು ಉಪಚುನಾವಣೆ ನಡೆದಿಲ್ಲ. ವಿಶೇಷ ಎಂದರೆ ಯಾವುದೇ ಶಾಸಕರಿಗೆ ಈವರೆಗೂ ಮಂತ್ರಿ ಪದವಿ ಪ್ರಾಪ್ತಿ ಆಗದಿರುವುದು.
ಮೊದಲ ಸಾರ್ವತ್ರಿಕ (1952) ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪಾರ್ಟಿ ಅಭ್ಯರ್ಥಿ ಬಿ.ಚಾಮಯ್ಯ ಹಾಗೂ ಸ್ವತಂತ್ರ ಅಭ್ಯರ್ಥಿ ಚನ್ನೇಗೌಡ, ಕೆ.ಎಂ. ಲಿಂಗೇಗೌಡ ವಿರುದ್ಧ ಕಾಂಗ್ರೆಸ್‌ನ ಹುರಿಯಾಳು ಬಿ.ವೈ.ನೀಲೇಗೌಡ ಗೆದ್ದು ವಿಧಾನಸೌಧ ಪ್ರವೇಶಿಸಿದರು. ಇಲ್ಲಿ ಕಾಂಗ್ರೆಸ್‌ನ ವರ್ಚಸ್ಸು ಮತ್ತು ಕ್ಷೇತ್ರದ ಜನರ ಅಭಿಮಾನ ಕೆಲಸ ಮಾಡಿತು.
ಶಾಸಕ ಬಿ.ವೈ. ನೀಲೇಗೌಡ ಇತರೆ ರಾಜಕಾರಣಿಗಳ ಸಹಕಾರದಲ್ಲಿ ಕ್ಷೇತ್ರಕ್ಕೆ ಸಕ್ಕರೆ ಕಾರ್ಖಾನೆಯನ್ನು ತಂದು ಜನಮನ್ನಣೆ ಪಡೆದರು. ಆದರೆ, 1957ರ ಚುನಾವಣೆಯಲ್ಲಿ ಕಾಂಗ್ರೆಸ್ ನೀಲೇಗೌಡ ಅವರಿಗೆ ಕೈ ಕೊಟ್ಟ ಶ್ರೀರಂಗಪಟ್ಟಣ ಮೂಲದ ದಮಯಂತಿ ಬೋರೇಗೌಡರ ಕೈ ಹಿಡಿಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ನಿರ್ಧಾರ ಮಾಡಿದ ನೀಲೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಜಿಗಿದರು. ಕಾಂಗ್ರೆಸ್‌ನಲ್ಲಿನ ಒಡಕಿನ ಲಾಭ ಪಡೆದುಕೊಂಡ ಪಿಎಸ್‌ಪಿ ಅಭ್ಯರ್ಥಿ ಬಿ.ಚಾಮಯ್ಯ ಸುಲಭವಾಗಿಯೇ ಗೆಲವು ಸಾಧಿಸಿದರು.
ಹಿಂದಿನ ಚುನಾವಣೆಯಲ್ಲಾದ ತಪ್ಪಿನಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್, 1962ರ ಚುನಾವಣೆಯಲ್ಲಿ ಮಾಜಿ ಶಾಸಕ ಬಿ.ವೈ.ನೀಲೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತು. ಪಿಎಸ್‌ಪಿ ಅಭ್ಯರ್ಥಿ ಎನ್.ಎ. ಚನ್ನೇಗೌಡ ವಿರುದ್ಧ ನೀಲೇಗೌಡರು ಜಯಭೇರಿ ಬಾರಿಸಿದರು.
1967ರಲ್ಲಿ ಕಾಂಗ್ರೆಸ್, ಯುವ ನಾಯಕ ಡಿ.ಹಲಗೇಗೌಡ ಕಣಕ್ಕಿಳಿಸಿತು. ಮೂರು ಚುನಾವಣೆಗಳ ಸೋಲಿನಿಂದ ಅನುಕಂಪ ಗಿಟ್ಟಿಸಿಕೊಂಡಿದ್ದ ಎನ್.ಎ.ಚನ್ನೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದಿಗ್ವಿಜಯ ಸಾಧಿಸಿದರು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಭ್ಭಾಗವಾದಾಗ 1972ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಕೆ.ಕೆಂಪೇಗೌಡ ಮತ್ತು ಆಡಳಿತ ಕಾಂಗ್ರೆಸ್‌ನಿಂದ ಹಲಗೇಗೌಡ ಸ್ಪರ್ಧಿಸಿದರು. ಗ್ರಾಪಂ ಮತ್ತು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಕೆಂಪೇಗೌಡರು ದಿಟ್ಟ ಹೋರಾಟ ನಡೆಸಿದರಾದರೂ ಹಲಗೇಗೌಡರ ಎದುರು ಗೆಲ್ಲಲು ಸಾಧ್ಯವಾಗಲಿಲ್ಲ.
1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸಿ.ಬಿ. ಮರಿಗೌಡ ಮತ್ತು ರೆಡ್ಡಿ ಕಾಂಗ್ರೆಸ್‌ನಿಂದ ಡಿ.ಹಲಗೇಗೌಡ ಕಣಕ್ಕಿಳಿದರೆ, ಜನತಾ ಪಕ್ಷದಿಂದ ಕೆ.ಆರ್.ರಾಜಗೋಪಾಲ್ ಚುನಾವಣಾ ರಂಗ ಪ್ರವೇಶಿಸಿದರು. ಹಲಗೇಗೌಡರ ವಿರುದ್ಧ ರಾಜಗೋಪಾಲ್ ಭರ್ಜರಿ ಜಯ ಸಾಧಿಸಿದರು. 1983ರ ಚುನಾವಣೆಯಲ್ಲಿ ರೈತಸಂಘದ ಬೆಂಬಲದೊಂದಿಗೆ ಸುಲಭವಾಗಿ ಗೆದ್ದ ಕೆ.ಕೆಂಪೇಗೌಡ, 1985 ರಲ್ಲಿಯೂ ಮರು ಆಯ್ಕೆಯಾದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಹಲಗೇಗೌಡ ಅವರಿಗೆ ವಿಜಯಲಕ್ಷ್ಮಿ ಒಲಿದಳು.
1994ರ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಡಿ.ಹಲಗೇಗೌಡ ಅವರಿಗೆಯೇ “¸’ ಫಾರಂ ನೀಡಿತು. ಇದರಿಂದ ಅಸಮಾಧಾನಗೊಂಡ ಕೆಂಪೇಗೌಡ ಸ್ವತಂತ್ರರಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾದರು. ಈ ವೇಳೆಗಾಗಲೇ ರೈತಪರ ಹೋರಾಟಗಳ ಮೂಲಕ ಜನಮನ್ನಣೆ ಪಡೆದಿದ್ದ ಕೆ.ಎಸ್.ಪುಟ್ಟಣ್ಣಯ್ಯ ರೈತ ಸಂಘದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು.
ರಾಜ್ಯವ್ಯಾಪ್ತಿ ಕಾಂಗ್ರೆಸ್ ಪರ ಅಲೆ ಎದ್ದಿದ್ದ 1999ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಕೆ.ಕೆಂಪೇಗೌಡ ಅವರು ಚುನಾವಣೆಯಲ್ಲೂ ಗೆದ್ದರು. ಜನತಾ ದಳ ಅಭ್ಯರ್ಥಿಯಾಗಿದ್ದ ಸಿ.ಎಸ್.ಪುಟ್ಟರಾಜು ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ ಕೆ.ಎಸ್. ಪುಟ್ಟಣ್ಣಯ್ಯ ಸೋಲು ಅನುಭವಿಸುತ್ತಾರೆ.
2004ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸಿ.ಎಸ್. ಪುಟ್ಟರಾಜು 2ನೇ ಬಾರಿ ಹಾಗೂ ಕೆ.ಎಸ್. ಪುಟ್ಟಣ್ಣಯ್ಯ 3ನೇ ಬಾರಿ ಸ್ಪರ್ಧಿಸಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಥಮ ಬಾರಿ ರಣರಂಗ ಪ್ರವೇಶಿಸಿದ ಎಲ್.ಡಿ. ರವಿ ಪ್ರಬಲ ಪೈಪೋಟಿ ನೀಡಿದರು. ಇದು ಪುಟ್ಟರಾಜು ಅವರ ಗೆಲವಿಗೆ ನೆರವಾಯಿತು.
ಆನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನಪ್ರಿಯತೆ ವೃದ್ಧಿಸಿಕೊಂಡಿದ್ದ ಶಾಸಕ ಸಿ.ಎಸ್.ಪುಟ್ಟರಾಜು 2008ರ ಚುನಾವಣೆಯಲ್ಲಿ ಮತ್ತೊಮ್ಮೆ ಸುಲಭವಾಗಿ ಜಯಸಾಧಿಸಿದರು. ಕಾಂಗ್ರೆಸ್ಸಿಗರು ಪರೋಕ್ಷವಾಗಿ ರೈತಸಂಘ ಅಭ್ಯರ್ಥಿ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿದರೂ ಪ್ರಯೋಜನವಾಗಲಿಲ್ಲ.
ಈಗ ರೈತರ ಸಮಸ್ಯೆ ಹಾಗೂ ಕಾವೇರಿ ನೀರಿನ ಹೋರಾಟದ ಮೂಲಕ ರೈತಸಂಘ ಕ್ಷೇತ್ರದಲ್ಲಿ ಪ್ರಬಲವಾಗಿಯೇ ಸಂಘಟನೆಗೊಂಡಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲದಿಂದಾಗಿ ಒಂದಿಷ್ಟು ಶಕ್ತಿ ಹೆಚ್ಚಿಸಿಕೊಂಡಿರುವ ರೈತ ಸಂಘ, ಜೆಡಿಎಸ್‌ನ ಭದ್ರಕೋಟೆಯಾಗಿರುವ ಮೇಲುಕೋಟೆಯಲ್ಲಿ ಹಸಿರು ಬಾವುಟ ಹಾರಿಸಲು ಟೊಂಕಕಟ್ಟಿ ನಿಂತಿದೆ. ಇಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದೇ ಕುತೂಹಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!