ಕ.ಪ್ರ.ವಾರ್ತೆ ್ಣ ಮದ್ದೂರು ್ಣ ಮಾ.30
ಏ.1 ರಿಂದ 10 ದಿನಗಳ ಕಾಲ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಾದ್ಯಂತ 4164 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಶನಿವಾರ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ 2169 ಬಾಲಕರು, 1995 ಬಾಲಕಿಯರು ಸೇರಿದಂತೆ ಒಟ್ಟು 4164 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪುನರಾವರ್ತಿತ 60, ಖಾಸಗಿಯಾಗಿ 65, ಖಾಸಗಿ ಪುನರಾವರ್ತಿತ 21 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು. ತಾಲೂಕಿನಾದ್ಯಂತ ಒಟ್ಟು 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 4 ಪ್ರಶ್ನೆ ಪತ್ರಿಕೆ ವಿತರಣೆ ರಚಿಸಲಾಗಿದೆ. ಪತ್ರಿಕೆ ವಿತರಣೆಗಾಗಿ ಮಾರ್ಗಾಧಿಕಾರಿಗಳು, ಸಹಾಯಕ ಮಾರ್ಗಾಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪರೀಕ್ಷೆಗಳು ಬೆಳಗ್ಗೆ 9 ರಿಂದ ಪ್ರಾರಂಭವಾಗಲಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಎಲ್ಲಾ 19 ಪರೀಕ್ಷಾ ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳದ ಸದಸ್ಯರನ್ನು ರೋಟೇಷನ್ ಆಧಾರದ ಮೇಲೆ ನೇಮಿಸಲಾಗಿದೆ. ಅಲ್ಲದೇ ಪರೀಕ್ಷಾ ಸಂಬಂಧ 306 ಮಂದಿ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.