ಪಾಂಡವಪುರ: ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಿಜ್ಞಾನಗಳಿದ್ದರೂ ಅಂಗವೈಫಲ್ಯ ನಿವಾರಣೆ ಸಾಧ್ಯವಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಯಶ್ವಂತ್ ಮಲ್ಲಿಗೆರೆ ವಿಷಾದಿಸಿದರು.
ಪಟ್ಟಣದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯದಿಂದ ಆಯೋಜಿಸಿದ್ದ ವಿಕಲಚೇತನರ ವೈದ್ಯಕೀಯ ಮೌಲ್ಯಿಕ ಶಿಬಿರದಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಿಸಿ ಅವರು ಮಾತನಾಡಿದರು.
ಅಂಗವೈಫಲ್ಯ ನಿವಾರಣೆ ವಿಚಾರದಲ್ಲಿ ಹಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ, ನಿವಾರಣೆಯಾಗುತ್ತಿಲ್ಲ. ಪ್ರತಿಯೊಬ್ಬ ಪೋಷಕರು ಅಂಗವೈಫಲ್ಯದ ಬಗ್ಗೆ ಎಚ್ಚರ ವಹಿಸಬೇಕು. ಸರ್ಕಾರಗಳು ವಿಕಲಚೇತನರಿಗೆ ತಿಂಗಳಿಗೆ ರು. 1200 ಮಾಸಾಶನ ನೀಡುತ್ತಿದೆ. ಇನ್ನು ಹೆಚ್ಚಿನ ಅನುದಾನ ನೀಡಬೇಕು ಎಂದರು.
ಅಂಕವಿಕಲತೆ ಶಾಪವಲ್ಲ. ಹಾಗಾಗಿ ವಿಕಲಚೇತನರು ಆತ್ಮವಿಶ್ವಾಸ ಕಳೆದುಕೊಳ್ಳದೆ ಎಲ್ಲ ಕ್ಷೇತ್ರದಲ್ಲೂ ಭಾಗವಹಿಸಿ, ತಮ್ಮ ಭವಿಷ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬಿದರು.
ಜಿಪಂ ಅಧ್ಯಕ್ಷೆ ಮಂಜುಳಾ ಪರಮೇಶ್ ಮಾತನಾಡಿದರು. ವಿಕಲಚೇತನ ಮಕ್ಕಳಿಗೆ ನಾನಾ ಪರಿಕರಗಳನ್ನು ವಿತರಿಸಲಾಯಿತು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ ಕಟ್ಟೇರಿ ಶಾಲೆಯ ಎಚ್.ಆರ್.ಜ್ಯೋತಿ, ಮೂಡಲಕೊಪ್ಪಲು ಶಾಲೆಯ ಎಂ.ಎಸ್. ಅನುಷಾ ಮತ್ತು ಪಟ್ಟಣದ ಶಾಂತಿ ನಗರ ಶಾಲೆಯ ಸಿ.ಟಿ. ದೀಪಿಕ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ಉಚಿತ ಕಂಪ್ಯೂಟರನ್ನು ವಿತರಿಸಲಾಯಿತು.
ಜಿ.ಪಂ. ಸದಸ್ಯ ಎ. ಎಲ್. ಕೆಂಪೇಗೌಡ, ತಹಸೀಲ್ದಾರ್ ಡಿ. ಎಸ್. ಶಿವಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಚಂದ್ರಶೇಖರ್, ಕ್ಷೇತ್ರ ಸಮನ್ವಯಾಧಿಕಾರಿ ಧನಂಜಯ್, ಮಲ್ಲಿಕಾರ್ಜುನ್, ಚಂದ್ರಶೇಖರ್, ಯುವರಾಜ್ ಉಪಸ್ಥಿತರಿದ್ದರು.