ಶ್ರೀರಂಗಪಟ್ಟಣ: ಅಕ್ರಮವಾಗಿ ಮೈಸೂರಿಗೆ ಮರಳು ಸಾಗಿಸುತ್ತಿದ್ದ 2 ಲಾರಿಗಳನ್ನು ಪಟ್ಟಣದ ಪೊಲೀಸರು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ಬಿ.ಜಿ. ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪಾಂಡವಪುರ ಮತ್ತು ಕೆ.ಆರ್.ಪೇಟೆ ಮಾರ್ಗದಿಂದ ಮೈಸೂರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಲಾರಿ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಟಿಪ್ಪರ್ ಲಾರಿ ವಶ
ಮಳವಳ್ಳಿ: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ಸಾರ್ವಜನಿಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾರ್ಗವಾಗಿ ಸೋಮವಾರ ಸಂಜೆ 6 ಗಂಟೆ ಸಮಯದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮರಳು ಸಾಗಾಣಿಕೆ ಮಾಡುತ್ತಿರುವ ಆರು ಟಿಪ್ಪರ್ ಲಾರಿಗಳನ್ನು ಪತ್ತೆ ಹಚ್ಚಿರುವ ಅದೇ ಗ್ರಾಮದ ವಾಸಿಗಳು ಸದರಿ ಲಾರಿಗಳು ಖಚಿತವಾಗಿ ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿದೆ ಎಂದು ಚಿಕ್ಕಬಾಗಿಲು ಗ್ರಾಮಸ್ಥರು ಲಾರಿಗಳನ್ನು ತಾವೇ ಹಿಡಿದು ಬೆಳಕವಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಮಸ್ಥರಿಂದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಳಕವಾಡಿ ಪಿಎಸ್ಐ ನಂಜಪ್ಪ ಲಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೋಪಾ ವೃತ್ತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಮದ್ದೂರು: ತಾಲೂಕಿನ ಸೋಮನಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್-2014ನೇ ಶೈಕ್ಷಣಿಕ ಸಾಲಿಗೆ ಐ.ಎಂ.ಸಿ. ಕೋಟಾದಡಿ ಟೂಲ್ ಅಂಡ್ ಡೈ ಮೇಕರ್, ಜೋಡಣೆಗಾರ, ವಿದ್ಯುನ್ಮಾನ ದುರಸ್ತಿಗಾರ, ಎಂ.ಅರ್.ಸಿ. 2 ವರ್ಷದ ವೃತ್ತಿಗಳು ಹಾಗೂ 1 ವರ್ಷದ ಕೋಪಾ ವೃತ್ತಿ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇದುವರೆಗೂ ಅರ್ಜಿ ಸಲ್ಲಿಸದಿರುವ ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ರು.50- ಅನ್ನು ಪಾವತಿಸುವುದು. ಅರ್ಜಿಯನ್ನು ಸಲ್ಲಿಸಲು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ತರಬೇತಿ ಸಂಸ್ಥೆಯನ್ನು (ದೂ-08232-232520) ಸಂಪರ್ಕಿಸಲು ಕೋರಿದೆ.