ಮೈಸೂರು: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜಿನಾಮೆ ಸಲ್ಲಿಸಿದ್ದು, ಗುರುವಾರ (ಜ.24) ಸಂಜೆ 4ಕ್ಕೆ ಕುವೆಂಪುನಗರದ ಮರುಳೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಳ್ಳುವುದಾಗಿ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಎಚ್.ವಾಸು ಹೇಳಿದರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ತಮ್ಮ ಹಿಂಬಾಲಕರಿಗೆ ಮಾತ್ರ ಪ್ರಾತಿನಿಧ್ಯ ನೀಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಪಕ್ಷದಲ್ಲಿನ ಕೆಲವರ ಸ್ವಾರ್ಥ ಮತ್ತು ತಮ್ಮ ಹಿಂಬಾಲಕರಿಗೆ ಹೆಚ್ಚಿನ ಮನ್ನಣೆ ನೀಡುತ್ತಿರುವುದು ನನಗೆ ಬೇಸರ ತಂದಿದೆ. ಅಲ್ಲದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುವಾಗಲೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಪಕ್ಷದಲ್ಲಿನ ನಿಷ್ಠಾವಂತರಿಗೆ ಹೆಚ್ಚು ಆದ್ಯತೆ ನೀಡುವಂತೆ ಕೇಳಿದ್ದೆ. ಆದರೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಮಾನಿಗಳನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.