ಮೈಸೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿರುವುದಕ್ಕೆ ಇಲ್ಲಿನ ಕರ್ನಾಟಕ ವಿಕಾಸ ವಾಹಿನಿ ಸ್ವಾಗತಿಸಿದೆ.
ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರು ಜನಮುಖಿ ನಾಯಕರಾಗಿದ್ದು, ಕಾಂಗ್ರೆಸ್ನ ವರಿಷ್ಠರು ಹಾಗೂ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದರಿಂದ ರಾಜ್ಯವು ಹತ್ತು ಹಲವು ದಿಕ್ಕಿನಲ್ಲಿ ಪ್ರಗತಿ ಕಾಣಲು ಸಾಧ್ಯವಾಗಲಿದೆ ಎಂದು ವಾಹಿನಿಯ ರಾಜ್ಯ ಸಂಚಾಲಕ ಎಸ್. ಶ್ರೀಕಾಂತ್, ನಗರ ಸಂಚಾಲಕ ಮರಡೇಶಮೂರ್ತಿ, ಜಿಲ್ಲಾ ಸಂಚಾಲಕ ಪ್ರಸನ್ನ, ಎಸ್.ಕೆ. ಮಹದೇವ, ಸೋಮಯ್ಯ ಮಲಿಯೂರು ತಿಳಿಸಿದ್ದಾರೆ.
ಮೈಸೂರು ವಾಣಿಜ್ಯ, ಕೈಗಾರಿಕಾ ಸಂಸ್ಥೆ ಸ್ವಾಗತ: ಡಿ. ದೇವರಾಜ ಅರಸ್ ಅವರ ನಂತರ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಲಭಿಸಿರುವುದನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತಿಸಿದೆ.
ಮೈಸೂರು ರಾಜ್ಯದ 2ನೇ ನಗರವಾಗಿದ್ದರೂ ಆರ್ಥಿಕ, ಸಾಮಾಜಿಕ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈಗ ಜಿಲ್ಲೆ ಮತ್ತು ರಾಜ್ಯದ ಸಂಪೂರ್ಣ ಅರಿವಿರುವ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದಕ್ಕೆ ಸಂಸ್ಥೆಯ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅಭಿನಂದಿಸಿದ್ದಾರೆ.