ಮೈಸೂರು

ಆರಂಭವಾಗದ ಶಾಲಾ ಕಾಂಪೌಂಡ್ ಕಾಮಗಾರಿ

ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 19
ಅಧಿಕಾರಿಗಳ ಅಸಡ್ಡೆಯಿಂದ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅಡಿಪಾಯ ತೆಗೆದು ಕಲ್ಲು ಮತ್ತು ಮರಳನ್ನು ಸಂಗ್ರಹಿಸಿ ಆರು ತಿಂಗಳಾಗಿದ್ದರೂ ಈವರೆಗೂ ಕಾಮಗಾರಿ ಆರಂಭಿಸದಿರುವುದರಿಂದ ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗಿದೆ.
ತಾಲೂಕಿನ ಚುಂಚನಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲು ಆರು ತಿಂಗಳಿನಿಂದ ಕಾಮಗಾರಿ ಮಾಡದಿರುವುದರಿಂದ ಶಾಲೆಗೆ ಬರುವ ಮಕ್ಕಳು ಗುಂಡಿಯಲ್ಲಿ ಬೀಳುವುದರ ಜತೆಗೆ ಮರಳು ಕಲ್ಲಿನ ಮೇಲೆ ಆಟವಾಡಿ ಬಿದ್ದು ಗಾಯಗೊಳ್ಳುತ್ತಿವೆ.
ಆರಂಭದಲ್ಲಿ ಕುಪ್ಪೆ ಗ್ರಾಪಂ ವತಿಯಿಂದ ಮಾಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಪೌಂಡ್ ನಿರ್ಮಾಣ ಮಾಡಲು ಅಡಿಪಾಯ ತೆಗೆದು ಸಾಮಗ್ರಿಗಳನ್ನು ಸಂಗ್ರಹಿಸಲಾಯಿತು.
ಆದರೆ ಶಿಕ್ಷಣ ಇಲಾಖೆಯವರು ಕಾಮಗಾರಿಗೆ ಅವಕಾಶ ನೀಡದೆ ಸರ್ವಶಿಕ್ಷಣ ಅಭಿಯಾನ ಯೋಜನೆಯ ಹಣದಿಂದ ತಾವೇ ಕಾಂಪೌಂಡ್ ನಿರ್ಮಾಣ ಮಾಡುವುದಾಗಿ ಹಿಂದಿನ ಕಾಮಗಾರಿಗೆ ತಡೆಯೊಡ್ಡಿದರು. ಆದರೆ ಗ್ರಾಪಂಗೆ ಕಾಮಗಾರಿ ನಿರ್ವಹಿಸಲು ಅವಕಾಶ ನೀಡದೆ ತಾವೂ ನಿರ್ಮಾಣ ಮಾಡದೆ ಅಸಡ್ಡೆ ತೋರುತ್ತಿದ್ದು, ಇದರಿಂದ ಮಕ್ಕಳ ಪ್ರಾಣಕ್ಕೆ ಎರವಾಗುವ ಸಾಧ್ಯತೆಯಿದೆ. ಸಮಸ್ಯೆಯನ್ನು ಕ್ಷೇತ್ರ ಶಿಕ್ಷಣಾಧಿಕರಿಗಳ ಗಮನಕ್ಕೆ ತಂದರೂ ಸಹ ಅವರು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತುರ್ತು ಕ್ರಮ ಕೈಗೊಂಡು ಆರು ತಿಂಗಳಿಂದ ಅಡಿಪಾಯದ ಹಂತದಲ್ಲಿಯೇ ಇದ್ದು, ಮಕ್ಕಳಿಗೆ ತೊಂದರೆ ನೀಡುತ್ತಿರುವ ಕಾಂಪೌಂಡ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

'ಮಕ್ಕಳ ಭವಿಷ್ಯಕ್ಕೆ ಸ್ವ ಸಹಾಯ ಸಂಘ ಅಗತ್ಯ'
ಕ.ಪ್ರ.ವಾರ್ತೆ ಟಿ.ನರಸೀಪುರ ಮೇ 19
ಮಹಿಳೆಯರು ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉಪಯುಕ್ತವಾಗಲಿದೆ ಎಂದು ಬನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಡಿ. ಸುರೇಶ್‌ಕುಮಾರ್ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ ಸಹಾಯ ಸಂಘದ ಒಕ್ಕೂಟ ಉದ್ಘಾಟಿಸಿ, ಹೊಂಬಾಳೆ ಬಿಡಿಸುವ ಮೂಲಕ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಸಹಾಯ ಸಂಘಟನೆಯನ್ನು ಸದ್ಬಳಕೆ ಮಾಡಿಕೊಳ್ಳಲೆಂದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಪದ್ಧತಿಯ ಮೂಲಕವೇ ಆರ್ಥಿಕವಾಗಿ ಪ್ರಗತಿಯ ಹೊಂದುತ್ತಿದ್ದಾರೆ. ಹಣ ಉಳಿತಾಯ ಮಾಡುತ್ತಾ, ವಿವಿಧ ಮೂಲಗಳ ಮೂಲಕ ಹಣಕಾಸಿನ ನೆರವು ಹಾಗೂ ಸಾಲ ಪಡೆದುಕೊಂಡು ಸ್ವಾವಲಂಬನೆಯ ಬದುಕು ನಡೆಸುತ್ತಿದ್ದಾರೆ. ಸಹಕಾರಿ ತತ್ವದ ಉಪಯುಕ್ತತೆ ಮಹಿಳೆಯರ ಮೂಲಕ ಯಶಸ್ಸನ್ನು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರೆಲ್ಲರೂ ಆರ್ಥಿಕವಾಗಿ ಸದೃಢರಾಗಲು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಅವರು ಕರೆ ನೀಡಿದರು.
ನೂತನ ಪದಾಧಿಕಾರಿಗಳು: ಸೋಸಲೆ ಹಾಗೂ ಕಳ್ಳೀಪುರ ಗ್ರಾಮಗಳಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಅಂಗಡಿ ಶಿವಕುಮಾರ್, ಉಪಾಧ್ಯಕ್ಷರಾಗಿ ರೇಣುಕಾ, ಕಾರ್ಯದರ್ಶಿಯಾಗಿ ಅಕ್ಷತಾ, ಸಹ ಕಾರ್ಯದರ್ಶಿಯಾಗಿ ಚಂದ್ರಶೇಖರ, ಕೋಶಾಧಿಕಾರಿಯಾಗಿ ಸುನೀತಾ, ಸೋಸಲೆ ಬಿ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಮಹದೇವಮ್ಮ, ಉಪಾಧ್ಯಕ್ಷರಾಗಿ ರಾಚಯ್ಯ, ಕಾರ್ಯದರ್ಶಿಯಾಗಿ ಆಶಾ, ಸಹ ಕಾರ್ಯದರ್ಶ ಸಾವಿತ್ರಮ್ಮ, ಕೋಶಾಧಿಕಾರಿಯಾಗಿ ಸುಂದರಮ್ಮ ಹಾಗೂ ಕಳ್ಳೀಪುರ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಜಯಮಾಲಾ, ಉಪಾಧ್ಯಕ್ಷರಾಗಿ ನವೀನ್, ಕಾರ್ಯದರ್ಶಿಯಾಗಿ ಮಹೇಶ್ವರಿ, ಸಹ ಕಾರ್ಯದರ್ಶಿಯಾಗಿ ಪರಿಮಳ ಮತ್ತು ಕೋಶಾಧಿಕಾರಿ ನಾಗರತ್ನ ನೇಮಕವಾಗಿದ್ದಾರೆ.
ಸೋಸಲೆ ಗ್ರಾಪಂ ಅಧ್ಯಕ್ಷ ಎಚ್. ಅಣ್ಣಯ್ಯಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ್ ಕುಲಾಲ್, ತಾಲೂಕಿನ ಯೋಜನಾಧಿಕಾರಿ ಮೋಹನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೌಭಾಗ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಕಾಶ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೆ. ಕೇಶವ, ಸೇವಾ ಪ್ರತಿನಿಧಿಗಳಾದ ಎಂ.ಗಾಯತ್ರಿ, ಸುಷ್ಮಾ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!