ಮೈಸೂರು: ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಮೈಸೂರು ಗ್ರಾಹಕರ ಪರಿಷತ್ತಿನವರು ನಗರಪಾಲಿಕೆ ಎದುರು ಸೋಮವಾರ ಮಧ್ಯಾಹ್ನ ಪ್ರತಿಭಟಿಸಿದರು. ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸಬೇಕು. ವಿಶ್ವಾಸಾರ್ಹವಲ್ಲದ ದೇವರಾಯ ಕಾಲುವೆಯಿಂದ ನೀರು ತೆಗೆಯುವುದರ ಬದಲು ಸೇತಿಕಟ್ಟೆಯ ಮೇಲ್ಭಾಗದಲ್ಲಿ ನದಿಯಿಂದಲೇ ನೀರು ತೆಗೆಯಬೇಕು. ಈ ಕಾರ್ಯವನ್ನು ತುರ್ತಾಗಿ ಕೈಗೊಂಡು, ಮುಂದಿನ ಬೇಸಿಗೆಯೊಳಗೆ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಎಲ್ಲ ಬಗೆಯ ನೀರು ಪೋಲನ್ನು ತಪ್ಪಿಸಬೇಕು. ಎಲ್ಲ ನೀರು ಸಂಪರ್ಕಗಳಿಗೆ ಮಾಪಕ ಅಳವಡಿಸಬೇಕು. ಮಾಪಕವಿಲ್ಲದ ಜೋಡಣೆಗಳಿಗೆ ನೀರು ಸರಬರಾಜು ಮಾಡಬಾರದು. ಮುಂದಿನ 5 ವರ್ಷ ನಗರಕ್ಕೆ ನೀರು ಸರಬರಾಜು ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿಲು ತಜ್ಞರ ಸಮಿತಿ ರಚಿಸಬೇಕು. ಮೈಸೂರಿನ ನೀರು ಮತ್ತು ಚರಂಡಿ ನಿರ್ವಹಿಸಲು ಸ್ವಾಯತ್ತ ನಿಕಾಯವನ್ನು ಸ್ಥಾಪಿಸಬೇಕು. ಇದನ್ನು ನಿಯಂತ್ರಿಸಲು ಆಯೋಗ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಪರಿಷತ್ತಿನ ಬಿ.ವಿ. ಶೆಣೈ, ಪ್ರೊ.ಬಿ.ಎಸ್. ಶಂಕರ, ಚಂದ್ರಪ್ರಸಾದ್, ಶ್ರೀಮತಿ ಹರಿಪ್ರಸಾದ್, ಮಹೇಶ್, ಸತ್ಯಾನಂದ ವಿಟ್ಟು ಮೊದಲಾದವರು ಇದ್ದರು.