ಮೈಸೂರು

ತರಕಾರಿ ವ್ಯಾಪಾರಕ್ಕೆ ಎಲ್ಲಿದೆ ಜಾಗ?

-ಕುಪ್ಪೆ ಮಹದೇವಸ್ವಾಮಿ
ಕೆ.ಆರ್. ನಗರ: ಕೆ.ಆರ್. ನಗರ ಪಟ್ಟಣದ ತರಕಾರಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಪುರಸಭೆ ವತಿಯಿಂದ ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆಯ ಕಾಮಗಾರಿ ಪೂರ್ಣಗೊಂಡಿದ್ದರೂ ವ್ಯಾಪಾರಿಗಳಿಗೆ ಲಭ್ಯವಾಗಿಲ್ಲ.
ಈಗ ನಿರ್ಮಾಣಗೊಂಡಿರುವ ಮಾರುಕಟ್ಟೆಯ ಸ್ಥಳದಲ್ಲಿ ಹಿಂದೆ ವ್ಯಾಪಾರಿಗಳು ಗೂಡಂಗಡಿ ಮಾಡಿಕೊಂಡು ತರಕಾರಿ ಮಾರಾಟ ಮಾಡುತ್ತಿದ್ದರು. ನಂತರ ಪುರಸಭೆ ವತಿಯಿಂದ ಮಾರುಕಟ್ಟೆ ನಿರ್ಮಾಣ ಮಾಡಲು ಅಲ್ಲಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿ ಪುರಸಭಾ ಬಯಲು ರಂಗ ಮಂದಿರದ ಮುಂದಿರುವ ಪುರಸಭೆಯ ಜಾಗಕ್ಕೆ ಸ್ಥಳಾಂತರಿಸಲಾಯಿತು.
ಪುರಸಭೆಯ ಜಾಗಕ್ಕೆ ವ್ಯಾಪಾರಿಗಳು ಸ್ಥಳಾಂತರಗೊಂಡರೂ ಯಾವುದೇ ಸವಲತ್ತುಗಳಿಲ್ಲದೆ ಎರಡು ವರ್ಷಗಳಿಂದ ಜೋಪಡಿಗಳಲ್ಲಿಯೆ ಕಿರಿದಾದ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಮಳೆಗಾಲದಲ್ಲಿ ಇವರ ಪಾಡು ಹೇಳತೀರದಾಗಿದೆ. ವ್ಯಾಪಾರಿಗಳಿಂದ ನೆಲ ಬಾಡಿಗೆ ಪಡೆಯುತ್ತಿರುವ ಪುರಸಭೆಯವರು ಯಾವುದೇ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಸಮಸ್ಯೆಯ ಬಗ್ಗೆ ಪುರಸಭೆಯ ಆಡಳಿತ ಮಂಡಳಿಯವರು ಗಮನ ಹರಿಸುತ್ತಿಲ್ಲ.
ನಂತರ ವ್ಯಾಪಾರಿಗಳು ಶಾಸಕ ಸಾ.ರಾ. ಮಹೇಶ್ ಅವರಿಗೆ ಮನವಿ ಸಲ್ಲಿಸಿ ಶಾಶ್ವತ ಮಾರುಕಟ್ಟೆ ನಿರ್ಮಿಸಿಕೊಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಪುರಸಭೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸ್ಥಳ ನಿಗದಿಪಡಿಸಿ ನೂರು ಮಂದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಒಂದೂವರೆ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಕಳೆದ ಜೂನ್‌ನಲ್ಲಿ ನೆರವೇರಿಸಿದ್ದರು.
ನಂತರ ಪಟ್ಟಣದ ಅಮೃತ ಮಹೋತ್ಸವದ ಅಂಗವಾಗಿ ಜ. 7ರಂದು ನಡೆದ ಕಾರ್ಯಕ್ರಮದಲ್ಲಿ ತರಕಾರಿ ಮಾರುಕಟ್ಟೆ ಉದ್ಘಾಟಿಸಲಾಯಿತು. ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಮಾರುಕಟ್ಟೆಯನ್ನು ಹಿಂದಿನ ಆಡಳಿತ ಮಂಡಳಿಯವರು ಉದ್ಘಾಟಿಸಿ ಶಿಲಾಫಲಕದಲ್ಲಿ ತಮ್ಮ ಹೆಸರು ಹಾಕಿಸಿಕೊಂಡರೆ ಹೊರತು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಲಿಲ್ಲ.
ಪುರಸಭೆ ಹಾಗೂ ಸರ್ಕಾರದಿಂದ ಹಣ ವ್ಯಯಿಸಿ ನಿರ್ಮಾಣ ಮಾಡಿರುವ ವ್ಯವಸ್ಥಿತ ತರಕಾರಿ ಮಾರುಕಟ್ಟೆಯನ್ನು ವ್ಯಾಪಾರಿಗಳಿಗೆ ನೀಡಿ ಅವರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಪಟ್ಟಣದ ಜನರಿಗೆ ಅನುಕೂಲ ಮಾಡದಿರುವ ಬಗ್ಗೆ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮಾರುಕಟ್ಟೆಯನ್ನು ವ್ಯಾಪಾರಿಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇವರೇನಂತಾರೆ?
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆಯ ಮಳಿಗೆಗಳನ್ನು ಬಹಿರಂಗವಾಗಿ ಹರಾಜು ಹಾಕಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲಿದ್ದು, ಆನಂತರ ಹರಾಜಿನ ದಿನಾಂಕ ನಿಗದಿಪಡಿಸಲಾಗುತ್ತದೆ. ಟೆಂಡರ್ ಕರೆದು ಬಹಿರಂಗ ಹರಾಜು ಹಾಕುವಾಗ ಇಚ್ಛೆಯುಳ್ಳವರು ಮಳಿಗೆ ಪಡೆಯಬಹುದು.
-ನಾಗಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ, ಕೆ.ಆರ್. ನಗರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!