ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಪಂ ವತಿಯಿಂದ ಆಯೋಜಿಸಿದ್ದ ಪ್ರಥಮ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಮಹಿಳೆಯರು ತಮ್ಮ ಗ್ರಾಮದ ಸಮಸ್ಯೆಗಳನ್ನು ತೋಡಿಕೊಂಡರು.
ಸಮಸ್ಯೆಗಳಿಗೆ ಸಿಡಿಪಿಒ ನವೀನ್ಕುಮಾರ್, ಎಸಿಡಿಪಿಒ ವೆಂಕಟಪ್ಪ, ಗ್ರಾಪಂ ಪಿಡಿಒ ಮಂಜುನಾಥ್ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದವರ ಗಮನ ಸೆಳೆಯಲಾಗುವುದು ಹಾಗೂ ಗ್ರಾಪಂ ವತಿಯಿಂದ ಆಗುವಷ್ಟು ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಗ್ರಾಪಂ ಅಧ್ಯಕ್ಷ ದಾ.ರಾ. ಮಹೇಶ್ ನೀಡಿದರು.
ಹನಗೋಡು-ಕೊಳವಿಗೆ ರಸ್ತೆ ಹಾಳಾಗಿ ಆರೇಳು ವರ್ಷ ಆದ್ರು ಸರಿಪಡಿಸಿಲ್ಲ, ದೊಡ್ಡಹೆಜ್ಜೂರು ಅಂಗನವಾಡಿ ಸೋರುತಿದೆ ಎಂದು ಕೋಪೋದ್ರಿಕ್ತರಾಗಿ ದೊಡ್ಡಹೆಜ್ಜೂರು ಗ್ರಾಮದ ಮಂಜುಳ ಹಾಗೂ ಜಯಮ್ಮ ಎಂದರೆ ದಾಸನಪುರದ ಶ್ವೇತ ಅಂಗನವಾಡಿ ಕಟ್ಟಡ ಕಟ್ಟಿದ್ರು ಇನ್ನು ಆರಂಭ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಚಿಕ್ಕಹೆಜ್ಜೂರಿನ ಮಣಿ, ಭರತವಾಡಿಯ ಕಾವೇರಿ ಅವರು ಸಂಘಕ್ಕೆ ಕಟ್ಟಡ ನಿರ್ಮಿಸಿಕೊಡಬೇಕೆಂದರೆ, ದೊಡ್ಡಹೆಜ್ಜೂರಿನ ಪದ್ಮಮ್ಮ ಹಾಗೂ ಶೀರಿಯಮ್ಮ ಚರಂಡಿಯಲ್ಲೇ ಹಳ್ಳ ಕೊರೆದು ನೀರು ಹಿಡಿಯುತ್ತಿದ್ದೆವೆಂದು ಅವಲತ್ತುಕೊಂಡರು. ಎಲ್ಲ ಸಮಸ್ಯೆಗಳಿಗೂ ಉತ್ತರ ನೀಡಿದ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಮಸ್ಯೆಯನ್ನು ನಿವಾರಿಸುವ ಕುರಿತು ಭರವಸೆ ನೀಡಿದರು.
ಸರ್ಕಾರ ಮಹಿಳೆಯರಿಗೆ ಪ್ರತ್ಯೇಕ ಗ್ರಾಮ ಸಭೆ ನಡೆಸಬೇಕೆಂಬ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೂಚನೆ ಮೇರೆಗೆ ಮಹಿಳೆಯರಿಗಾಗಿ ಪ್ರತ್ಯೇಕ ಗ್ರಾಮ ಸಭೆ ನಡೆಸಲಾಗುತ್ತಿದೆ. ಇಲ್ಲಿ ಮಹಿಳಾ ದೌರ್ಜನ್ಯ ತಡೆ, ಮಹಿಳೆಯರ ಆರ್ಥಿಕ, ಸಾಮಾಜಿಕ ಸ್ವಾವಲಂಬನೆ, ಮಹಿಳಾ ನಾಯಕತ್ವ, ಬಾಲ್ಯ ವಿವಾಹದಿಂದಾಗುವ ಅನಾಹುತಗಳು ಹಾಗೂ ಮಹಿಳೆಯರಿಗಾಗಿ ಇರುವ ಸರ್ಕಾರದ ಯೋಜನೆಗಳು, ಆರೋಗ್ಯ ಮಾಹಿತಿ ನೀಡುವ ಹಾಗೂ ಮಹಿಳೆಯರು ನಿರ್ಭಯವಾಗಿ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ಈ ಗ್ರಾಮ ಸಭೆ ಸಹಕಾರಿಯಾಗಿದ್ದು, ಇದೊಂದು ವಿಶಿಷ್ಟ ಗ್ರಾಮ ಸಭೆ ಎಂದು ಸಿಡಿಪಿಒ ನವೀನಕುಮಾರ್ ಪ್ರಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಎಸಿಡಿಪಿಒ ವೆಂಕಟಪ್ಪ ಹಾಗೂ ಡಾ.ಮಂಜುನಾಥ್, ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ದಾ.ರಾ. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ದೇವರಾಜ್, ಶಿವಕುಮಾರ್, ಸಾವರ್, ಬಿಡ್ಡಯ್ಯ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 200ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.