ಮೈಸೂರು

20ನಿಮಿಷ 20ಸುದ್ದಿ

ಮೈಸೂರು: ನಾಲ್ಕನೇ ವರ್ಷದ ವೀರಗಾಸೆ ಜಾನಪದೋತ್ಸವ ಹಾಗೂ ವೀರಭದ್ರಸ್ವಾಮಿ ವರ್ಧಂತಿ ಆ. 5 ರಂದು ಗೌರಿಶಂಕರನಗರದಲ್ಲಿ ನಡೆಯಲಿದೆ. ಅಭಿನವ ವೀರಭದ್ರ ನೃತ್ಯ ತಂಡವು ಅಂದು ಮಧ್ಯಾಹ್ನ 2 ಕ್ಕೆ ಏರ್ಪಡಿಸಿರುವ ಈ ಕಾರ್ಯಕ್ರಮವನ್ನು ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟಿಸುವರು ಎಂದು ಸಂಘಟನೆಯ ಅಧ್ಯಕ್ಷ ಕಿರಾಳು ಮಹೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕುದೇರುಮಠದ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಎಂ.ಕೆ. ಸೋಮಶೇಖರ್ ವೇದಿಕೆಯ ಅಂತರ್ಜಾಲವನ್ನು ಅನಾವರಣಗೊಳಿಸುವರು. ರಂಗಾಯಣದ ನಿರ್ದೇಶಕ ಎಚ್. ಜನಾರ್ದನ್ ಹಾಗೂ ಜೆಎಸ್‌ಎಸ್ ವಿದ್ಯಾ ಸಂಸ್ಥೆ ಉಪನ್ಯಾಸಕ ಸದಾಶಿವಪ್ಪ ಉಪನ್ಯಾಸ ನೀಡುವರು ಎಂದರು. ವಿವಿಧ ಕ್ಷೇತ್ರಗಳ ಗಣ್ಯರಾದ ಪ್ರೊ.ಪಿ.ವಿ. ನಂಜರಾಜೇ ಅರಸ್, ನಾರಾಯಣ್ ಕಿಕ್ಕೇರಿ, ಮಹದೇವಯ್ಯ, ಕೆ. ದೀಪಕ್, ಉಮೇಶ್ ಭಟ್, ಮಹದೇವಪ್ಪ, ಚಿನ್ನಸ್ವಾಮಿ, ಕೃಷ್ಣಮೂರ್ತಿ ಹಾಗೂ ಪರಶಿವಮೂರ್ತಿ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಸಾಧಕ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ
ಮೈಸೂರು: 2014-15ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ವಿದ್ಯಾಭ್ಯಾಸದ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸಲು ಅರ್ಜಿ ಆಹ್ವಾನಿಸಿದೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ವಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಥಮ ಪಿಯುಸಿಯಿಂದ ವೃತ್ತಿಪರ ಕೋರ್ಸ್‌ಗಳನ್ನು ಒಳಗೊಂಡಂತೆ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಅರ್ಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸಲಾಗುವುದು. ಅರ್ಹರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್, ಮೈಸೂರು ಇಲ್ಲಿ ನಿಗದಿತ ನಮೂನೆಯ ಅರ್ಜಿ ಪಡೆದು ಸೆ. 10 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ  ದೂ. 2564179 ಸಂಪರ್ಕಿಸಬಹುದು.

ಎಂಐಟಿ- ಎಂಬಿಎ ವೃತ್ತಿ ತರಬೇತಿ ಮುಕ್ತಾಯ
ಮೈಸೂರು: ವಿದ್ಯಾರ್ಥಿಗಳು ಜೀವನದಲ್ಲಿ ಮುಖ್ಯವಾಗಿ ನಿರ್ದಿಷ್ಟವಾದ ಗುರಿಗಳನ್ನು ಹೊಂದಿರಬೇಕು, ಅದಕ್ಕೆ ಅನುಗುಣವಾಗಿ ತಮ್ಮ ಜೀವನದಲ್ಲಿ  ಕನಸುಗಳ ಜೊತೆಗೆ ಕೌಶಲ್ಯ ಮತ್ತು ವಾಕ್ಚಾತುರ್ಯ ಬೆಳೆಸಿಕೊಳಬೇಕೆಂದು ಡಾ.ಟಿ.ಪಿ. ರೇಣುಕಮೂರ್ತಿ ಕರೆ ನೀಡಿದರು. ನಗರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನ ವಿಭಾಗ (ಎಂಬಿಎ) ದಿಂದ ಮೂರು ದಿನಗಳು ಸ್ನಾತಕೋತ್ತರ ನಿರ್ವಹಣಾ ಪದವಿ ಮತ್ತು ಸಂಶೋಧನ ವಿಭಾಗ (ಎಂಬಿಎ)ದ ವಿದ್ಯಾರ್ಥಿಗಳಿಗೆ ನಡೆದ ಶಿಬಿರದ  ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಎಂಐಟಿಯ ಸಂಶೋಧನಾ ವಿಭಾಗದ ಸಂಶೋಧನಾ ಸಂಯೋಜಕ ಡಾ.ಎನ್.ಕೆ. ರಾಮಚಂದ್ರಗೌಡ ಮಾತನಾಡಿ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮುಖ್ಯವಾದವು ಎಂದು ಹೇಳಿದರು.

ಅಂಧರು ಬದುಕಿನ ಮುನ್ನಡೆಗೆ ವಿಶ್ವಾಸಿಗಳಾಗಿ: ನಂಜುಂಡೇಗೌಡ
ಮೈಸೂರು: ಬದುಕನ್ನು ಧೈರ್ಯವಾಗಿ ಎದುರಿಸಲು ಅಂಧರು ವಿಶ್ವಾಸಿಗಳಾಗಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎನ್.ನಂಜುಂಡೇಗೌಡ ಹೇಳಿದರು. ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್ ಹಾಗೂ ಯುಡಿಐಎಸ್ ಫೋರಂ ಸಂಯುಕ್ತಾಶ್ರಯದಲ್ಲಿ ಗೋಕುಲಂನ ಬಾಪೂಜಿ ಮಕ್ಕಳ ಆಶ್ರಮದಲ್ಲಿ ಆಯೋಜಿಸಿರುವ ಅಂಧ ಹೆಣ್ಣು ಮಕ್ಕಳಿಗೆ ಉದ್ಯೋಗ ಮಾರ್ಗದರ್ಶನ ಹಾಗೂ ವೃತ್ತಿ ಸಮಾಲೋಚನೆ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಅಂಗವಿಕಲರ ಅಭಿವೃದ್ಧಿಗಾಗಿ ಅನೇಕ ವ್ಯಕ್ತಿಗಳು ಸಹಕರಿಸುತ್ತಿದ್ದಾರೆ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂತಹ ವ್ಯಕ್ತಿಗಳು, ಸಂಸ್ಥೆಗಳಿಂದ ನೆರವು ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು. ಈಗಾಗಲೇ ಇರುವ ಪ್ರತಿಭೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು ಎಂದು ಆಶಿಸಿದರು. ಯುಡಿಐಎಸ್ ಫೋರಂ ಟ್ರಸ್ಟಿ ಪ್ರೊ.ಆರ್. ಶ್ರೀನಿವಾಸ್ ಮಾತನಾಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬಲರಾಮ್, ಜೆಎಸ್‌ಎಸ್ ಕಾನೂನು ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ಎಸ್. ವೇಣುಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು. ರಘುರಾಂ ಸ್ವಾಗತಿಸಿದರು.

ಅಶೋಕಪುರಂನಲ್ಲಿ ನೇತ್ರ ತಪಾಸಣೆ ಶಿಬಿರ
ಮೈಸೂರು: ಅಶೋಕಪುರಂನ ಅಶೋಕ ಸ್ಪೋರ್ಟ್ಸ್ ಕ್ಲಬ್ ಹಾಗೂ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮವನ್ನು ಪಾಲಿಕೆ  ಹೆಚ್ಚುವರಿ ಆಯುಕ್ತ ಎನ್. ರಾಜು ಉದ್ಘಾಟಿಸಿದರು. ತಪಾಣೆಯಲ್ಲಿ ನಾಗರಿಕರು ಸೌಲಭ್ಯ ಪಡೆದರು. ವೈದ್ಯರಾದ ನವೀನ್, ಉದ್ಯಮಿ ರಾಧಾಕೃಷ್ಣ, ಕ್ಲಬ್‌ನ ಪ್ರಧಾನ ಖಜಾಂಚಿ ಪಿ. ಚಂದ್ರಶೇಖರ್, ಸದಸ್ಯರಾದ ರಾಜೇಂದ್ರ ಪ್ರಸಾದ್, ಮೋಹನ್ ಇದ್ದರು.

ಪುನಶ್ಚೇತನ ಕಾರ್ಯಕ್ರಮ
ಮೈಸೂರಿನ ಅಮೃತ ವಿದ್ಯಾಲಯದಲ್ಲಿ ನಡೆದ ಪದವಿ ವಿದ್ಯಾರ್ಥಿಗಳಿಗೆ ನಡೆದ ಪುನಶ್ಚೇತನ ಕಾರ್ಯಕ್ರಮದಲ್ಲಿ ಅಮೃತಗೀತಾನಂದ ಪುರಿ ಸ್ವಾಮೀಜಿ ಮಾತನಾಡಿದರು. ಪ್ರಾಂಶುಪಾಲೆ ಪ್ರೊ.ವಿದ್ಯಾ ಪೈ ಇದ್ದಾರೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು: ಪ್ರಗತಿಪರ ರೈತರ ಸಾಧನೆಗಳನ್ನು ಗುರುತಿಸಿ ಆತ್ಮ ಯೋಜನೆಯಡಿ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. ಕೃಷಿ ಕ್ಷೇತ್ರದಲ್ಲಿ ಗಮನಾರ್ಹ, ವಿಶಿಷ್ಟ ಸಾಧನೆ ಮಾಡಿರಬೇಕು. ಅವರ ಸಂಶೋಧನೆಗಳು, ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟು ಕೃಷಿ ಕ್ಷೇತ್ರದ ಏಳಿಗೆಗೆ ಪೂರಕವಾಗಿರಬೇಕು. ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ ಸಾವಯವ ಕೃಷಿ. ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ , ಹೈನುಗಾರಿಕೆ , ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ಹಸಿರು ಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಅಳವಡಿಸಿಕೊಂಡಿರುವ ರೈತರು ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಶಿಫಾರಸಿನೊಂದಿಗೆ  ನಿರ್ದೇಶಕರು, ವಿಸ್ತರಣಾ ನಿರ್ದೇಶನಾಲಯ ಕೃಷಿ ವಿಶ್ವ ವಿದ್ಯಾನಿಲಯ,  ಹೆಬ್ಬಾಳ, ಬೆಂಗಳೂರು ಇಲ್ಲಿಗೆ ಆ. 20 ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು.  

ಸ್ವಾತಂತ್ರ್ಯ ದಿನಾಚರಣೆ: ನೌಕರರ ಹಾಜರಿ ಕಡ್ಡಾಯ
ಮೈಸೂರು: ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಆ. 15ರ ಬೆಳಗ್ಗೆ 9ಕ್ಕೆ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಪ್ರಭಾರ ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಸೂಚಿಸಿದ್ದಾರೆ. ಅಂದು ಬೆಳಗ್ಗೆ 8ಕ್ಕೆ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣಾ ನಡೆಸಿ ನಂತರ ಬೆಳಗ್ಗೆ 9ಕ್ಕೆ ಓವಲ್ ಮೈದಾನದಲ್ಲಿ ನಡೆಯುವ ಮುಖ್ಯ ಸಮಾರಂಭಕ್ಕೆ ತಪ್ಪದೇ ಹಾಜರಾಗಬೇಕು. ಸಮಾರಂಭ ನಡೆಯುವ ಸ್ಥಳದಲ್ಲಿ ಪ್ರವೇಶ ದ್ವಾರದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರ ತಾತ್ಕಾಲಿಕ ಕಚೇರಿಯನ್ನು ತೆರೆಯಲಾಗುತ್ತಿದ್ದು, ಅಧಿಕಾರಿಗಳು, ನೌಕರರು ಕಾರ್ಯಕ್ರಮಕ್ಕೆ ಹಾಜರಾದ ಬಗ್ಗೆ ಹಾಜರಾತಿಯಲ್ಲಿ ಸಹಿ ಮಾಡುವುದು. ಅವರ ಹಾಜರಾತಿಯನ್ನು ಗಮನಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾದ ಸಿಬ್ಬಂದಿ ಸಹಿಯೊಂದಿಗೆ ಹಾಜರಾತಿ ಪಟ್ಟಿಯನ್ನು ಕಾರ್ಯಕ್ರಮ ಮುಗಿದ ಬಳಿಕ ಅಧ್ಯಕ್ಷರ ತಾತ್ಕಾಲಿಕ ಕಚೇರಿಗೆ ತಲುಪಿಸುವುದು.  ಗೈರು ಹಾಜರಾಗುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಿಎಲ್-7ಡಿ ಅಬಕಾರಿ ಸನ್ನದು ಮಂಜೂರು ಅರ್ಜಿ ಆಹ್ವಾನ
ಮೈಸೂರು: ಪ. ಜಾತಿ ಮತ್ತು ಪಂಗಡಕ್ಕೆ ಸೇರಿದ ಉದ್ಯಮಿಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟಕ್ಕೆ ಜೂ. 9ಕ್ಕೆ ಸಿಎಲ್-7ಡಿ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಸನ್ನದು ಮಂಜೂರಾತಿಗಾಗಿ ಅವಕಾಶ ಕಲ್ಪಿಸಿದೆ. ಸಿಎಲ್-7ಡಿ ಸನ್ನದನ್ನು ಮಂಜೂರು ಮಾಡಲು ನಗರಪಾಲಿಕೆ ಪ್ರದೇಶದಲ್ಲಿರುವ ಕಟ್ಟಡದಲ್ಲಿ ಕನಿಷ್‌ಠ 15 ಡಬಲ್ ಬೆಡ್ ರೂಂ ಹಾಗೂ ಇತರೆ ಪ್ರದೇಶಗಳಲ್ಲಿರುವ ಕಟ್ಟಡಗಳಲ್ಲಿ ಕನಿಷ್ಠ10 ಡಬಲ್ ಬೆಡ್ ರೂಂಗಳ ವ್ಯವಸ್ಥೆ ಇರಬೇಕು. ಆಸಕ್ತ  ಪ. ಜಾತಿ,  ಪಂಗಡದವರು ನಿಗದಿತ ಶುಲ್ಕವನ್ನು ಪಾವತಿಸಿ ಸಂಬಂಧಿಸಿದ ಜಿಲ್ಲೆಯ ಅಬಕಾರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಈ ವಿಷಯದ ಕುರಿತು ಚರ್ಚಿಸಲು ವ್ಯವಸ್ಥಾಪಕರು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವ್ಯವಸ್ಥಾಪಕರು, ವಾಲ್ಮೀಕಿ ಅಭಿವೃದ್ಧಿ ನಿಗಮ, ವ್ಯವಸ್ಥಾಪಕರು, ಜಿಲ್ಲಾ ಲೀಡ್ ಬ್ಯಾಂಕ್, ಜಿಲ್ಲೆಯ ಪ. ಜಾತಿ ಮತ್ತು ಪಂಗಡ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯನ್ನು ಆ. 4ರ ಮಧ್ಯಾಹ್ನ 3.30ಕ್ಕೆ ಕುವೆಂಪುನಗರದಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಕರೆಯಲಾಗಿದೆ.

ತಮ್ಮನ್ನು ರಕ್ಷಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು
ಮೈಸೂರು: ಸಮಾಜದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಮಹಿಳೆಯರು ಇದರಿಂದ ಹೊರಬರಬೇಕಾದರೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಲಕ್ಷ್ಮಿದೇವಿ ಕರೆ ನೀಡಿದರು. ಶನಿವಾರ ನಗರದ ನಟರಾಜ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ತಡೆ ವಿಷಯದ ಸಂವಾದದಲ್ಲಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಅವರು ಧರಿಸುವ ಉಡುಗೆ ತೊಡುಗೆಗಳಿಂದಲ್ಲ. ಬದಲಾಗಿ ಅತ್ಯಾಚಾರವೆಸಗುವ ವ್ಯಕ್ತಿಯ ವಿಕಾರವಾದ ಮನಸ್ಥಿತಿಯೇ ಕಾರಣ ಎಂದರು. ಕೆ.ಆರ್. ಠಾಣಾಧಿಕಾರಿ ಗೌರಿಶಂಕರ್, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಸಾಮಾಜಿಕ ಕಾರ್ಯಕರ್ತೆ ಸುಶೀಲಾ ನಾರಾಯಣ, ಸಂಘದ ಅಧ್ಯಕ್ಷ ಎಸ್. ಬಾಲಕೃಷ್ಣ ಇದ್ದರು.

ನಗರದ ನಾನಾ ಕಡೆ ತರಬೇತಿ ಕಾರ್ಯಕ್ರಮ ನಾಳೆ
ಮೈಸೂರು: ಉದ್ಯಮಿ ಮಿತ್ರ ವತಿಯಿಂದ ವಿದ್ಯಾವಂತ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಆ.4 ರಂದು ಸಾವಯವ ಕೃಷಿ, ಮನೆಯ ಮೇಲೊಂದು ಕೈತೋಟ ಮತ್ತು ಇನ್ನಿತರ ಉದ್ಯಮಿಗಳ ಕುರಿತು ಉಚಿತ ಮಾಹಿತಿ ಹಾಗೂ ತರಬೇತಿ ನೀಡಲಿದೆ ಆಸಕ್ತರು ಭಾಗವಹಿಸಬಹುದು. ಮಾಹಿತಿಗಾಗಿ ಮೊ. 7676784635, 9742710051ಕ್ಕೆ ಸಂಪರ್ಕಿಸಿ.
ಜಿಎಸ್‌ಎಸ್‌ಎಸ್ ಎಂಜಿನಿಯರಿಂಗ್ ಕಾಲೇಜಿನ ಕಾಲೇಜಿನ ಎಂ.ಗೋವಿಂದ ರಾವ್ ಮೆಮೋರಿಯಲ್ ಸಭಾಂಗಣದಲ್ಲಿ ಆ.4ರ ಬೆಳಗ್ಗೆ 10.30ಕ್ಕೆ ಮೊದಲ ವರ್ಷದ ಬಿ.ಇ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಭಾಗವಹಿಸುವರು. ಅತಿಥಿಗಳಾಗಿ ಗೀತಾ ಶಿಶು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವನಜಾ ಬಿ.ಪಂಡಿತ್, ಗೀತಾ ಶಿಶು ಶಿಕ್ಷಣ ಸಂಸ್ಥೆಯ ಎಂ. ಜಗನ್‌ನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಎಸ್‌ಎಸ್ ಮಹಿಳಾ ಕಾಲೇಜಿನ ಉದ್ಯೋಗ ಮಾಹಿತಿ ವಿಭಾಗದ ವತಿಯಿಂದ ಆ.4ರ ಬೆಳಗ್ಗೆ 10ಕ್ಕೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಕುರಿತಾಗಿ ಕಾರ್ಯಗಾರ ಆಯೋಜಿಸಲಾಗಿದೆ.

ಜೈವಿಕ ತ್ಯಾಜ್ಯ ನಿಯಂತ್ರಣ  ಆದೇಶ ಪಾಲಿಸಲು ಆಗ್ರಹ
ಮೈಸೂರು: ಮಲ ಹಾಗೂ ಜೈವಿಕ ತ್ಯಾಜ್ಯವನ್ನು ನಿಯಂತ್ರಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಮಾನವ ಹಕ್ಕು ಸಂರಕ್ಷಣ ಸೊಸೈಟಿಯು ಆಗ್ರಹಿಸಿದೆ. ರಾಜ್ಯಾದ್ಯಂತ ಪೌರಕಾರ್ಮಿಕರು ಪ್ರತಿದಿನ ಕಸವನ್ನು ತೆಗೆಯುವಾಗ ಪರೋಕ್ಷವಾಗಿ ಮಲ ಹಾಗೂ ವೈದ್ಯಕೀಯ, ಜೈವಿಕ ತ್ಯಾಜ್ಯವನ್ನು ತೆಗೆಯುತ್ತಿರುವುದನ್ನು ನಿಷೇಧಿಸುವಂತೆ ಜು. 4 ರಂದು ಮಾನವ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು ಎಂದು ವೇದಿಕೆಯ ಅಧ್ಯಕ್ಷ ಅ.ಮ. ಭಾಸ್ಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ದೂರನ್ನು ಪರಿಶೀಲಿಸಿದ ಆಯೋಗವು ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಈ ರೀತಿಯ ತ್ಯಾಜ್ಯದ ವಿಲೇವಾರಿಗೆ ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳಲ್ಲಾಗಿದೆ ಎಂಬ ವರದಿಯನ್ನು ನಾಲ್ಕು ವಾರದೊಳಗೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರದ ಪುರಸಭೆ ಆಡಳಿತ ಇಲಾಖೆಯ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದರು. ವಯಸ್ಕ ಹೆಣ್ಣು ಮಕ್ಕಳು ಧರಿಸುವ ಪ್ಯಾಡ್‌ಗಳಲ್ಲಿ ಕೆಲವು ರಾಸಾಯನಿಕ ವಸ್ತುಗಳು ಬಳಸುವುದರಿಂದ ಅದು ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಈ ಕೂಡಲೇ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಮಾಜದ ಉನ್ನತ ಪ್ರಗತಿಗೆ ಶಿಕ್ಷಣ ಮುಖ್ಯ: ಇಂದುಮತಿ
ಮೈಸೂರು: ವಿದ್ಯಾರ್ಥಿಗಳು ಜ್ಞಾನ ಗಳಿಸಿಕೊಂಡಾಗ ಮಾತ್ರ ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕಲು ಸಾಧ್ಯ ಎಂದು ಮೈಸೂರು ವಿವಿ ಕಲಾ ವಿಭಾಗದ ಡೀನ್ ಹಾಗೂ ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಇಂದುಮತಿ ಹೇಳಿದರು. ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಉನ್ನತ ಪ್ರಗತಿಗೆ ಶಿಕ್ಷಣವೇ ಮುಖ್ಯ ಮಾರ್ಗವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಶೈಕ್ಷಣಿಕವಾಗಿ ಪ್ರಗತಿಹೊಂದಿ ದೇಶಕ್ಕೆ ಕೀರ್ತಿ ತರುವಂತೆ ತಿಳಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಅಬ್ದುಲ್ ಜಮೀಲ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಕಾಲೇಜು ಸಿಇಒ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರೊ.ಎಂ. ಮಹದೇವಪ್ಪ, ಡಾ.ಎಸ್.ಕುಮಾರ್, ಬಿ.ವಿ. ವರಪ್ರಸಾದ್, ವೆಂಕಟರಾವ್, ಎಚ್.ಎಸ್. ಉಮೇಶ್, ವಸುಮತಿ, ಮಹದೇವಸ್ವಾಮಿ ಇದ್ದರು.

ಚಿಣ್ಣರ ವೇಷಭೂಷಣ ಸ್ಪರ್ಧೆ
ಮೈಸೂರಿನ ಜ್ಞಾನ ಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ನಡೆದ ಭಾರತದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಣ್ಣರು.

ಕಟ್ಟಡ ಕಾರ್ಮಿಕರಿಗೆ ಮೆಸಸ್ ತರಬೇತಿ ಶಿಬಿರ
ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಮೆಸರ್ಸ್ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಸಹಯೋಗದೊಂದಿಗೆ ನಗರದ ವಿದ್ಯಾರಣ್ಯಪುರಂನ ಎಂಬಿಸಿಟಿ ತರಬೇತಿ ಕೇಂದ್ರದಲ್ಲಿ ಕನ್ನಡ ಕಾರ್ಮಿಕರಿಗೆ ಮೆಸಸ್ ತರಬೇತಿ ಶಿಬಿರ ನಡೆಯಿತು. ಮುಖ್ಯ ಅತಿಥಿಗಳಾಗಿ ಮೈಸೂರು ಬಿಲ್‌ಡರ್ಸ್ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಿ. ಕೀರ್ತಿಕುಮಾರ್, ಬಿಎಐನ ಅಧ್ಯಕ್ಷ ಎಂ.ಸಿ. ಮಲ್ಲಿಕಾರ್ಜುನ್, ಗೌರವ ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯರಾವ್ ಹಾಗೂ ಘಟಕದ ಸದಸ್ಯರು ಭಾಗವಹಿಸಿದ್ದರು. ಎರಡು ದಿನ ನಡೆದ ತರಬೇತಿ ಶಿಬಿರದಲ್ಲಿ 55ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಟ್ಟಡ ಕೈಗಾರಿಕೆ, ಎಂಜಿನಿಯರಿಂಗ್ ಕಾಲೇಜಿನ ಪರಿಣಿತರಿಂದ ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಯಿತು. ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಮೆಸರ್ಸ್ ತಾಂತ್ರಿಕ ವಲಯದ ಮುಖ್ಯಸ್ಥ ಡಾ.ವಿ. ರಾಮಚಂದ್ರ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ, ಕಟ್ಟಡ ನಿರ್ಮಾಣದ ಸಲಕರಣೆ ಪೆಟ್ಟಿಗೆ ಹಾಗೂ ತರಬೇತಿ ಭತ್ಯೆಯನ್ನು ವಿತರಿಸಿದರು.

ಕೆ.ಆರ್. ಆಸ್ಪತ್ರೆಗೆ ಹುಸಿ ಬಾಂಬ್ ಕರೆ
ಮೈಸೂರು: ನಗರದ ಕೆ.ಆರ್. ಆಸ್ಪತ್ರೆಗೆ ಕಿಡಿಗೇಡಿಯೊಬ್ಬ ಹುಸಿ ಬಾಂಬ್ ಕರೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆಯಿತು. ಕೆ.ಆರ್. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸ್ಥಿರ ದೂರವಾಣಿಗೆ ಮಧ್ಯಾಹ್ನ 3.30ಕ್ಕೆ ವ್ಯಕ್ತಿಯೊಬ್ಬ ಕರೆ ಮಾಡಿ, ಆಸ್ಪತ್ರೆಯಲ್ಲಿ ಬಾಂಬ್ ಇರಿಸಲಾಗಿದೆ. ಇನ್ನೂ ಅರ್ಧ ಗಂಟೆಯಲ್ಲಿ ಚೆಲುವಾಂಬ ಮತ್ತು ಕೆ.ಆರ್. ಆಸ್ಪತ್ರೆ ಸ್ಫೋಟವಾಗಲಿದೆ ಎಂದಿದ್ದಾನೆ. ಈ ವಿಚಾರವನ್ನು ಕ್ಯಾಸುವಾಲಿಟಿ ಸಿಬ್ಬಂದಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್‌ಗೆ ರವಾನಿಸಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ವಾನದಳ, ಬಾಂಬ್ ಪತ್ತೆ ದಳದ ಸಿಬ್ಬಂದಿ ಚೆಲುವಾಂಬ ಮತ್ತು ಕೆ.ಆರ್.ಆಸ್ಪತ್ರೆ ಸಂಪೂರ್ಣವಾಗಿ ಎರಡು ಗಂಟೆಗಳ ಕಾಲ ಶೋಧಿಸಿದರೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತೀರ್ಮಾನಿಸಿದರು. ಈ ಬಾಂಬ್ ಕರೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಂಬಂಧಿಕರು, ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿತ್ತು. ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.

ಪತ್ರಕರ್ತರ ಸಂಘದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಸಂಘದ ಸದಸ್ಯರಿಗಾಗಿ 2013-14ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ವರದಿ ಕಳುಹಿಸುವವರು ಈ ಕೆಳಕಂಡ ನಿಯಮ ಅನುಸರಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‌ಬಾಬು ಹೇಳಿದ್ದಾರೆ. 2013ರ ಜೂ.1 ರಿಂದ 2014ರ ಮೇ 31ರ ಅವಧಿಯಲ್ಲಿ ವರದಿ ಪ್ರಕಟವಾಗಿರಬೇಕು. ಒಂದೇ ವರದಿ ನೀಡಬೇಕು. 3 ನಕಲು ಪ್ರತಿ ಜತೆಗೆ ಒಂದು ಮೂಲ ಪ್ರತಿ ನೀಡಬೇಕು. ಛಾಯಾಗ್ರಾಹಕರು 8್ಢ12 ಅಳತೆಯ 3 ಫೋಟೋ ಪ್ರಿಂಟ್ ಜತೆಗೆ ಪತ್ರಿಕೆಯ ಮೂರು ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ವಿದ್ಯುನ್ಮಾನ ಮಾಧ್ಯಮದವರು ವರದಿಯ ಪ್ರಸಾರದ ಕ್ಲಿಪಿಂಗ್ ಒಳಗೊಂಡ 3 ಸಿಡಿ ಸಲ್ಲಿಸಬೇಕು. ಆ.15ರ ಮಧ್ಯಾಹ್ನ 12ರೊಳಗೆ ವರದಿಯನ್ನು ಸಂಘದ ಕಚೇರಿಗೆ ತಲುಪಿಸಬೇಕು. ವಿವರಗಳಿಗೆ ಡಿ.ಎನ್.ಮಹೇಂದ್ರ, ಮೊ. 8453577438, ಬಿ.ಶ್ರೀಕಂಠಸ್ವಾಮಿ, ಮೊ.9740022888 ಸಂಪರ್ಕಿಸಬಹುದು. ಛಾಯಾಚಿತ್ರ, ಅತ್ಯುತ್ತಮ ವಿದ್ಯುನ್ಮಾನ ವರದಿಗೆ ಸಂಬಂಧಿಸಿದಂತೆ ಎಸ್.ಆರ್.ಮಧುಸೂದನ್, ಮೊ. 9448569867 ಹಾಗೂ ರಾಮ್, ಮೊ. 9980914168 ಸಂಪರ್ಕಿಸಿ.

7 ದಿನಗಳ ಕಾಲ ಯೋಗಾಸನ ಶಿಬಿರಗಳು ನಾಳೆಯಿಂದ
ಮೈಸೂರು: ಲಕ್ಷ್ಮೀಪುರಂನಲ್ಲಿರುವ ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್‌ನಲ್ಲಿ ಆ.4 ರಿಂದ ಏಳು ದಿನಗಳ ಕಾಲ ಸಂಜೆ 6.30 ರಿಂದ 7.30 ರವರೆಗೆ ಮುದ್ರಾ ಪ್ರಾಣಾಯಾಮ ಶಿಬಿರ ನಡೆಸಲಿದ್ದು, ಮೊ. 99456 14565 ಸಂಪರ್ಕಿಸಬಹುದು. ಕುವೆಂಪುನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್‌ನಲ್ಲಿ ಆ.4 ರಿಂದ ಸಂಜೆ 6.30 ರಿಂದ 7.30 ರವೆಗೆ ಮುದ್ರಾ ಯೋಗ ಮತ್ತು ಪ್ರಾಣಾಯಾಮ ಶಿಬಿರ ಏರ್ಪಡಿಸಿದ್ದು, ಮೊ. 94496 96998 ಸಂಪರ್ಕಿಸಬಹುದು. ರಾಮಾನುಜ ರಸ್ತೆಯಲ್ಲಿರುವ ಮೈಸೂರು ಯೋಗ ಶಾಲೆಯಲ್ಲಿ ಆ.4 ರಿಂದ ಬೆಳಗ್ಗೆ 6 ರಿಂದ 7 ರವರೆಗೆ ಹಾಗೂ ಸಂಜೆ 7.30 ರಿಂದ ರಾತ್ರಿ 8.30 ರವರೆಗೆ ಸರಳೀಕೃತ ಯೋಗಾಸನ ತರಬೇತಿ ಶಿಬಿರ ಏರ್ಪಡಿಸಿದ್ದು, ಮೊ.94498 86322 ಸಂಪರ್ಕಿಸಬಹುದು. ಕುವೆಂಪುನಗರದಲ್ಲಿರುವ ಜಿಎಸ್‌ಎಸ್ ಯೋಗಿಕ್ ರಿಸರ್ಚ್ ಫೌಂಡೇಷನ್‌ನಲ್ಲಿ ಆ.4 ರಿಂದ ಬೆಳಗ್ಗೆ 6 ಹಾಗೂ ಸಂಜೆ 5.30 ರಿಂದ 6.30 ರವರೆಗೆ ಯೋಗ ತರಗತಿ ನಡೆಸಲಿದ್ದು, ಮೊ. 95380 76642 ಸಂಪರ್ಕಿಸಬಹುದು.

ಕುಸ್ತಿ ಪಂದ್ಯಾವಳಿ ಪ್ರಚಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 67ನೇ ಹುಟ್ಟುಹಬ್ಬದ ಅಂಗವಾಗಿ ನಡೆಯುವ ಕುಸ್ತಿ ಪಂದ್ಯಾವಳಿಯ ಪ್ರಚಾರ ವಾಹನಕ್ಕೆ ಚೌಹಳ್ಳಿ ಪುಟ್ಟಸ್ವಾಮಿ, ಸಿ.ಕೃಷ್ಣಪ್ಪ ಚಾಲನೆ ನೀಡಿದರು. ಪೈ. ದೇಶೀಗೌಡ, ರವಿ, ಜಯರಾಂ, ವೆಂಕಟೇಶ್, ಕಜಯಸ್ವಾಮಿ, ನಾಜಿಮುದ್ದಿನ್ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!