ಮೈಸೂರು: ಮುಂದಿನ ಹತ್ತು ವರ್ಷಗಳಲ್ಲಿಯಾದರೂ ಶಾಂತಿ- ಸಾಮರಸ್ಯದಲ್ಲಿ ಭಾರತವು ಜಗತ್ತಿನ ಹತ್ತು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಹೇಳಿದರು.
ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಸೆನೆಟ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ 7ನೇ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಜಾತಿ, ಮತ ಮತ್ತು ಭಾಷೆಯ ಆಧಾರದ ಭಿನ್ನಾಭಿಪ್ರಾಯ ಬಿಡಬೇಕು. ಎಲ್ಲರೂ ಒಂದೆ, ನಾವೆಲ್ಲ ಭಾರತೀಯರು ಎಂಬ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಶಾಂತಿ- ಸಾಮರಸ್ಯ ಬೆಳೆಯಲು ಸಾಧ್ಯ. ಕರ್ನಾಟಕದಲ್ಲಿ ಕಳೆದ 200 ವರ್ಷಗಳಿಂದ ಯಾವುದೆ ಕೋಮು ಗಲಭೆಗಳು ನಡೆದಿಲ್ಲ. ನೈಸರ್ಗಿಕ ವಿಪತ್ತುಗಳೂ ಸಂಭವಿಸಿಲ್ಲ. ಜಪಾನ್ ಆಗಾಗ ನೈಸರ್ಗಿಕ ವಿಪತ್ತಿಗೆ ಒಳಗಾದರೂ ಅಭಿವೃದ್ಧಿಯಲ್ಲಿ ಮೇಲೆ ಬರುತ್ತಿದೆ. ಆ ರೀತಿ ಭಾರತೀಯರು ಸಹ ಅಭಿವೃದ್ಧಿ ಹೊಂದಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಜಪಾನೀಯರನ್ನು ನೋಡಿ ಕಲಿಬೇಕು: ಮುಂದಿನ ಹತ್ತು ವರ್ಷಗಳಲ್ಲಿ ಶಾಂತಿ- ಸಾಮರಸ್ಯದಲ್ಲಿ ಭಾರತವು ಜಗತ್ತಿನ ಹತ್ತು ರಾಷ್ಟ್ರಗಳ ಪೈಕಿ ಒಂದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಬೇಕು. ಸಾಮರಸ್ಯವನ್ನು ಜಪಾನೀಯರನ್ನು ನೋಡಿ ಕಲಿಯಬೇಕು. ನಾವು ಅಭಿವೃದ್ಧಿ ಹೊಂದದಿದ್ದರೆ ಇತರೆ ರಾಷ್ಟ್ರಗಳು ನಮಗೆ ಬೆಲೆ ಕೊಡುವುದಿಲ್ಲ ಎಂಬುದನ್ನು ಅರಿಯಬೇಕು. ಜಗತ್ತಿನ 162 ರಾಷ್ಟ್ರಗಳ ಪೈಕಿ ಭಾರತ ಶಾಂತಿ- ಸಾಮರಸ್ಯದಲ್ಲಿ 142ನೇ ಸ್ಥಾನದಲ್ಲಿದೆ. ಇದು 2020ರ ವೇಳೆಗೆ 140ನೇ ಸ್ಥಾನಕ್ಕೆ ಮುಟ್ಟಿದರೂ ಸಾಧನೆಯೆ. ಏಕೆಂದರೆ ಭಾರತ ಪದೆ ಪದೆ ಭಯೋತ್ಪಾದನ ದಾಳಿಗೆ ಒಳಗಾಗುತ್ತಿದೆ. ಜೊತೆಗೆ ನಕ್ಸಲ್ ಪೀಡಿತ ರಾಜ್ಯಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ಅನೇಕ ಸಂದರ್ಭಗಳಲ್ಲಿ ಆಂತರಿಕ ಕಲಹಗಳು ನಮಗೆ ತೊಂದರೆ ಉಂಟುಮಾಡುತ್ತವೆ. ಇದೆ ಕಾರಣಕ್ಕೆ ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲ ದುರ್ಬಳಕೆ ಮಾಡುತ್ತಿದ್ದೇವೆ. ದೇಶದ ಭವಿಷ್ಯವು ಯುವಕರ ಕೈಯಲ್ಲಿದೆ. ಯುವಕರಿಂದ ಮಾತ್ರ ದೊಡ್ಡ ಬದಲಾವಣೆ ನಿರೀಕ್ಷಿಸಲು ಸಾಧ್ಯ. ದೇಶದ 600 ಜಿಲ್ಲೆಗಳ ಪೈಕಿ 100 ಜಿಲ್ಲೆಗಳು ನಕ್ಸಲ್ ಪೀಡಿತ ಪ್ರದೇಶವಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಸಚಿವ ಪ್ರೊ.ಸಿ. ಬಸವರಾಜು ಮಾತನಾಡಿ, ಇಡಿ ವಿಶ್ವ ಶಾಂತಿ ಸ್ಥಾಪನೆ ಬಯಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಎಷ್ಟೇ ಸಾಧನೆ ಮಾಡಿದರೂ, ಶಾಂತಿ- ಸೌಹಾರ್ದತೆಯ ಹೊರತು ಬೇರೆನೂ ಇಲ್ಲ. ನಾಗರೀಕತೆ ಬೆಳೆದಂತೆ ನಾವು ಮಾನವೀಯತೆ ಮರೆಯುತ್ತಿದ್ದೇವೆ ಎಂದರು.
ಮಹಾಜನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಆರ್.ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮರಿಯ ಸೊಡೆನ್, ಪ್ರೊ.ಯಶವಂತ್ ದೊಂಗ್ರೆ, ಪ್ರೊ.ಕಲ್ಪನಾ ವೇಣುಗೋಪಾಲ್, ಪ್ರೊ.ಜಿ.ಬಿ. ಬಸವರಾಜು, ಡಾ.ಕೆ.ವಿ. ಪ್ರಭಾಕರ್, ಎನ್ಎಸ್ಎಸ್ ಸಂಚಾಲಕ ಡಾ.ಕೆ. ಕಾಳಚನ್ನೇಗೌಡ ಇದ್ದರು.