ಮೈಸೂರು

ನಾಳೆ ಚದುರಂಗ ಪಂದ್ಯಾವಳಿ

ಮೈಸೂರು: ಮೈಸೂರು ಜಿಲ್ಲಾ ಚೆಸ್ ಅಸೋಸಿಯೇಷನ್, ಎಸ್‌ಕೆಆರ್ ಪ್ರತಿಷ್ಠಾನ ಮತ್ತು ಮೈಸೂರು ಚೆಸ್ ಸೆಂಟರ್‌ನ ಸಂಯುಕ್ತ ಆಶ್ರಯದಲ್ಲಿ ಆ.1 ರಿಂದ 3 ರವರೆಗೆ ರಾಜ್ಯಮಟ್ಟದ ಮಹಿಳಾ ಮುಕ್ತ ಚದುರಂಗ ಪ್ರಶಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯ ಮೊದಲ ನಾಲ್ಕು ಮಂದಿ ವಿಜೇತರು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗುವರು. ಒಟ್ಟು 10 ಸಾವಿರ ನಗದು ಬಹುಮಾನ ನೀಡಲಾಗುವುದು. ಆಸಕ್ತರು 300 ಪ್ರವೇಶ ಶುಲ್ಕದೊಂದಿಗೆ ಆ.1ರ ಬೆಳಗ್ಗೆ 8.30ಕ್ಕೆ ಸ್ಥಳದಲ್ಲಿಯೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 8123819220 ಸಂಪರ್ಕಿಸಬಹುದು.

ದೇಜಗೌಗೆ ಸನ್ಮಾನ
ಕರ್ನಾಟಕ ವಿಚಾರ ವೇದಿಕೆಯು ಆ.31ರ ಸಂಜೆ 5.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ಬುದ್ಧ, ಬಸವೇಶ್ವರ, ಅಂಬೇಡ್ಕರ್ ಮತ್ತು ನೂರರ ಹೊಸ್ತಿಲಲ್ಲಿ ಡಾ.ದೇಜಗೌಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ. ಸಾಹಿತಿ ಡಾ.ಮಳಲಿ ವಸಂತಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಮರಳಿ ಧರ್ಮರಾಜ್, ಶಿವಬಸಪ್ಪ ಹೊರೆಯಾಲ ಅತಿಥಿಯಾಗಿ ಭಾಗವಹಿಸುವರು.

ಉಪನ್ಯಾಸ
ಮೈಸೂರು ವಿವಿ ತತ್ವಶಾಸ್ತ್ರ ಅಧ್ಯನ ವಿಭಾಗದ ಸ್ವಾಮಿ ವಿವೇಕಾನಂದ ಪೀಠವು ಜು.31ರ ಮಧ್ಯಾಹ್ನ 3.30ಕ್ಕೆ ದಟ್ಟಗಳ್ಳಿಯ ಕೌಟಿಲ್ಯ ವಿದ್ಯಾಲಯದಲ್ಲಿ ಉಪನ್ಯಾಸ ಮಾಲೆ ಆಯೋಜಿಸಿದೆ. ಡಾ.ಆರ್.ಬಾಲಸುಬ್ರಹ್ಮಣ್ಯಂ ಉಪನ್ಯಾಸ ನೀಡುವರು. ಕೌಟಿಲ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ರಘು ಅಧ್ಯಕ್ಷತೆ ವಹಿಸುವರು. ವಿಭಾಗದ ಅಧ್ಯಕ್ಷ ಡಾ.ಎಚ್.ಎಲ್. ಚಂದ್ರಶೇಖರ ಭಾಗವಹಿಸುವರು.

ಪರೀಕ್ಷಾ ತರಬೇತಿ
ಕೃಷಿಕ್ ಸರ್ವೋದಯ ಫೌಂಡೇಷನ್ ಜು.31ರ ಸಂಜೆ 5ಕ್ಕೆ ವಿಜಯನಗರ 2ನೇ ಹಂತದ ಕೃಷಿಕ್ ಭವನದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ಮಾರ್ಗದರ್ಶನ ಮತ್ತು ತರಬೇತಿ ಆಯೋಜಿಸಿದೆ. ಆಸಕ್ತರು ಭಾಗವಹಿಸಬಹುದು. ಡಾ.ಜಿ.ಗೋವಿಂದರಾಜು ಅವರ ಮೊ. 9945752592 ಸಂಪರ್ಕಿಸಬಹುದು.

ಒಳಾಂಗಣ ವಿನ್ಯಾಸ ತರಗತಿ
ಮೈಸೂರು ಇಂಟೀರಿಯರ್ ಅಂಡ್ ಡಿಸೈನ್ಸ್ ಅಕಾಡೆಮಿಯು ಜು.31ರ ಬೆಳಗ್ಗೆ 11ಕ್ಕೆ ಇಂಟೀರಿಯರ್ ಡಿಸೈನ್ ತರಗತಿ ಆರಂಭಿಸುತ್ತಿದೆ. ಇನ್‌ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನ್, ವಿದ್ಯಾಕೇಂದ್ರ, ಕಾವೇರಿ ವಿದ್ಯಾಸಂಸ್ಥೆ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ ಇಲ್ಲಿ ತರಗತಿ ನಡೆಯಲಿದೆ. ಆಸಕ್ತರು ಕೂಡಲೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9035336060 ಸಂಪರ್ಕಿಸಬಹುದು.

ಕಿರಿಯ ಸಂಶೋಧಕ ಹುದ್ದೆ
ಮೈಸೂರು ವಿವಿ ವಿಜ್ಞಾನ ಭವನವು ಯುಜಿಸಿ ಪ್ರಾಯೋಜಿತ ಸಂಶೋಧನೆಗಾಗಿ ಕಿರಿಯ ಸಂಶೋಧಕರಿಂದ ಅರ್ಜಿ ಆಹ್ವಾನಿಸಿದೆ. ಸೈನ್ಸ್, ಪಾಲಿಮರ್ ಸೈನ್ಸ್ ಮತ್ತು ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಎಂಎಸ್ಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದವ ಮತ್ತು ಎನ್‌ಇಟಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಪ್ರಥಮ ವರ್ಷ 16 ಸಾವಿರ ಸಂಭಾವನೆ ಮತ್ತು ದ್ವಿತೀಯ ವರ್ಷ ರು. 18 ಸಾವಿರ ಸಂಭಾವನೆ ನೀಡಲಾಗುತ್ತದೆ. ಆಸಕ್ತರು ಜು.31 ರೊಳಗೆ ಸಂಚಾಲಕರು, ಸಿಪಿಇಪಿಎ ಯೋಜನೆ, ವಿಜ್ಞಾನ ಭವನ, ಮಾನಸ ಗಂಗೋತ್ರಿ, ಮೈಸೂರು ಸಂಪರ್ಕಿಸಿ.

ಕಣ್ಣಿನ ತಪಾಸಣೆ
ಅಶೋಕ ಸ್ಪೋರ್ಟ್ಸ್ ಕ್ಲಬ್, ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಜು. 31ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಅಶೋಕಪುರಂನ ಅಶೋಕ ಸ್ಪೋಟ್ಸ್ ಕ್ಲಬ್‌ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ. ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್. ರಾಜು ಕಾರ್ಯಕ್ರಮ ಉದ್ಘಾಟಿಸುವರು. ಹೆಚ್ಚಿನ ಮಾಹಿತಿಗೆ ಮೊ. 9632937919 ಸಂಪರ್ಕಿಸಿ.

ಕಲಾವಿದನ ಚಿಕಿತ್ಸೆಗೆ ನೆರವಿಗೆ ಮನವಿ
ಮೈಸೂರು: ಚಿತ್ರ ಹಾಗೂ ಶಿಲ್ಪ ಕಲಾವಿದ ಹೇಮಂತ್‌ಕುಮಾರ್ ಅವರ ಚಿಕಿತ್ಸೆಗೆ ನೆರವು ನೀಡುವಂತೆ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಮುಖ್ಯಸ್ಥ ವಿ.ಎ.ದೇಶಪಾಂಡೆ ಮನವಿ ಮಾಡಿದರು. ಕಳೆದ ನಾಲ್ಕು ವಾರಗಳ ಹಿಂದೆ ಡೆಂಘೀ ಜ್ವರಕ್ಕೆ ತುತ್ತಾಗಿ ಕಿಡ್ನಿ, ಶ್ವಾಸಕೋಶ, ಮೆದುಳು ನಿಷ್ಕ್ರೀಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದು, ಅವರ ಮನೆಯವರು ಅಸಹಾಯಕರಾಗಿರುವ ಹಿನ್ನೆಲೆಯಲ್ಲಿ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ನೆರವು ನೀಡುವಲ್ಲಿ ನಾಗರಿಕರು ಮುಂದಾಗಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಪರಿಚಿತರ ಸಹಾಯದಿಂದ ಐದಾರು ಲಕ್ಷ ರು. ಖರ್ಚು ಮಾಡಿದ್ದಾರೆ. ಸ್ವಲ್ಪ ಚೇತರಿಸಿಕೊಂಡಿರುವ ಹೇಮಂತಕುಮಾರ್‌ಗೆ ಇನ್ನೂ 5 ಲಕ್ಷ ಅವಶ್ಯಕತೆಯಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವರ ಕುಟುಂಬದವರಿಗೆ ಇದನ್ನು ಭರಿಸುವುದು ಅಸಾಧ್ಯವಾಗಿದೆ. ಆದ್ದರಿಂದ ಈ ಬಡ ಕಲಾವಿದನಿಗೆ ಸಹಾಯ ಮಾಡುವಂತೆ ಅವರು ಕೋರಿದರು. ಆಸಕ್ತ ದಾನಿಗಳು ಸರಸ್ವತಿಪುರಂ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0788101060565 ಗೆ ಹಣ ಸಂದಾಯ ಮಾಡಬಹುದು. ಅಥವಾ ಖುದ್ದಾಗಿ ನೀಡಲು ಮೊ. 9844408231 ಸಂಪರ್ಕಿಸಬಹುದು.

ದಸರಾ ಫಲಪುಷ್ಷ ಪ್ರದರ್ಶನ: ನಾಳೆ ಸಭೆ
ಮೈಸೂರು: ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘ ಸಂಯುಕ್ತವಾಗಿ ದಸರಾ ಉತ್ಸವದ ಸಮಯದಲ್ಲಿ ಫಲಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷ ಆಯೋಜಿಸುತ್ತಿದೆ. ಈ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸುವ ಖಾಸಗಿ ತೋಟಗಳ ಸ್ಪರ್ಧೆಗಳಿಗೆ ಜು.31ರ ಬೆಳಗ್ಗೆ 11.30ಕ್ಕೆ ಕರ್ಜನ್ ಪಾರ್ಕ್ ಆವರಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸ್ಪರ್ಧಿಸುವ ಎಲ್ಲ ಸ್ಪರ್ಧಿಗಳು ತಮ್ಮ ಪ್ರದರ್ಶಿಕೆಗಳನ್ನು ನಿಶಾದ್ ಬಾಗ್ ಕುಪ್ಪಣ್ಣ ಪಾರ್ಕ್ ಆವರಣಕ್ಕೆ ತಂದು ಪ್ರದರ್ಶಿಸುವಂತೆ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಸಿ.ಆರ್. ಕೃಷ್ಣಕುಮಾರ್ ತಿಳಿಸಿದ್ದಾರೆ.

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ
ಮೈಸೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉತ್ತರ ವಲಯ ಮಟ್ಟದ ಪದಾಧಿಕಾರಿಗಳಾಗಿ ಬಿ.ಎಲ್. ಲಿಂಗರಾಜು (ಅಧ್ಯಕ್ಷರು), ಪುರುಷೋತ್ತಮ (ಉಪಾಧ್ಯಕ್ಷರು), ಟಿ.ಎಸ್. ಗೋಪಿನಾಥ (ಖಜಾಂಚಿ), ಮಹದೇವಪ್ಪ (ಕಾರ್ಯದರ್ಶಿ), ಬದರಿನಾರಾಯಣ ಪ್ರಸಾದ್ (ಸಂಘಟನಾ ಕಾರ್ಯದರ್ಶಿ), ಎಂ.ಎನ್. ಸುರೇಶ್ (ಸಹ ಕಾರ್ಯದರ್ಶಿ), ರಹಮಾನ್ ಖಾನ್ (ರಾಜ್ಯ ಪರಿಷತ್ ಸದಸ್ಯರು), ವರದನಾಯಕ (ಜಿಲ್ಲಾ ಸಂಘದ ಪ್ರತಿನಿಧಿ), ಭಾರತಿ ಎಸ್. ಶಾಸ್ತ್ರಿ (ಮಹಿಳಾ ಸಹ ಕಾರ್ಯದರ್ಶಿ), ಆರ್. ಪ್ರಕಾಶ್ (ಕ್ರೀಡಾ ಸಹಕಾರ್ಯದರ್ಶಿ), ಎಂ. ಮುರಳೀಧರರಾವ್ (ಸಾಂಸ್ಕೃತಿಕ ಸಹ ಕಾರ್ಯದರ್ಶಿ), ಕೆ.ಎಂ. ಸುರೇಶ್ (ಸಂಘಟನಾ ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

ಶ್ರಮದಾನ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆಯಲ್ಲಿ ಮಹಾಪತಿ ಮತ್ತು ಮಹಾಮಾಯೆ ಮಹಿಳಾ ಸಂಘದ ಸದಸ್ಯರು ಡಾ.ಬಿ.ಆರ್.ಅಂಬೇಡ್ಕರ್ ಪ್ರಗತಿಪರ ಒಕ್ಕೂಟದ ಬುದ್ಧ ಭೂಮಿಯಲ್ಲಿ ಮಂಗಳವಾರ ಶ್ರಮದಾನ ಮಾಡಿದರು. ಬುದ್ಧ ಭೂಮಿಯನ್ನು ಶುಚಿಗೊಳಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಒಕ್ಕೂಟದ ಅಧ್ಯಕ್ಷ ನಾಗಯ್ಯ ಮಳಲಿ, ಅಂತರಸಂತೆ ಮಂಚಯ್ಯ, ಟ್ರಸ್ಟ್‌ನ ಅಧ್ಯಕ್ಷ ಗೋವಿಂದರಾಜು, ರತ್ನಾಕರ, ಹಾಲಯ್ಯ, ಗೋಪಾಲ, ಶಿಕ್ಷಕರಾದ ಸೋಮಯ್ಯ, ಮಹಾಮಾಯೆ ಸಂಘದ ಅಧ್ಯಕ್ಷೆ ದೇವಮ್ಮ, ಶಿವಮ್ಮ, ಮಹಾಪತಿ ಸಂಘದ ನಾಗಮ್ಮ, ನಾಗಿ ನೇತೃತ್ವ ವಹಿಸಿದ್ದರು. 50 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

ಪತ್ರಿಕಾ ದಿನಾಚರಣೆ ನಾಳೆ
ಕೆ.ಆರ್. ನಗರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.31 ರಂದು ಗುರುವಾರ ಪಟ್ಟಣದ ಐಎಂಎ ಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಅಂದಿನ ಕಾರ್ಯಕ್ರಮವನ್ನು ಶಾಸಕ ಸಾ.ರಾ. ಮಹೇಶ್ ಉದ್ಘಾಟಿಸಲಿದ್ದು, ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಪುರಸಭಾ ಅಧ್ಯಕ್ಷೆ ಪಾರ್ವತಿ ನಾಗರಾಜು, ತಾಪಂ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಸಂಘದ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ ಭಾಗವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ನಾಗೇಶ್ ತಿಳಿಸಿದ್ದಾರೆ.

ಮಕ್ಕಳ ರಕ್ಷಣೆ ಜಾಗೃತಿ
ಅಂತರಸಂತೆ: ಸಮಾಜದಲ್ಲಿ ಮಹಿಳೆಯರ ಮೇಲೆ ಹಾಗೂ ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ಪ್ರಕರಣಗಳನ್ನು ತಹಬದಿಗೆ ತರುವ ಸಲುವಾಗಿ ಸರ್ಕಾರದ ಸೂಚನೆಯಿಂದ ಗ್ರಾಪಂ ವತಿಯಿಂದ ಜು. 31 ರಂದು ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತಾದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುವುದು. ನಂತರ 11ಕ್ಕೆ ಅಂತರಸಂತೆ ಗ್ರಾಪಂ ಆವರಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಗ್ರಾಪಂ ಅಧ್ಯಕ್ಷೆ ಎ.ಎನ್. ಲೀಲಾಶಂಕರ್ ಅಧ್ಯಕ್ಷತೆ ವಹಿಸುವರು.

ಕ್ರೀಡಾಕೂಟಕ್ಕೆ ಚಾಲನೆ
ರಾವಂದೂರು: ಮಕ್ಕಳ ಮಾನಸಿಕ ಮತ್ತು ದೈಹಿಕ ಅಭಿವೃದ್ಧಿಗೆ ಕ್ರೀಡೆ ಬಹಳ ಮುಖ್ಯವಾದದ್ದು ಎಂದು ಶಿಕ್ಷಣ ಸಂಯೋಜಕ ಯೋಗರಾಜ್ ತಿಳಿಸಿದರು. ತಾಲೂಕಿನ ರಾವಂದೂರಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಅನೇಕ ಪ್ರತಿಭೆಗಳು ಸುಪ್ತವಾಗಿರುತ್ತವೆ. ಅಂತಹ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿದಾಗ ಮಾತ್ರ ಪ್ರತಿಭೆ ಅನಾವರಣವಾಗುತ್ತದೆ ಎಂದರು. ನಿವೃತ್ತ ಎಂಎಸ್‌ಐಎಲ್ ಅಧಿಕಾರಿ ಬೀರೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಕ್ರೀಡಾಕೂಟದಲ್ಲಿ ಅತ್ಯುತ್ತಮ ಪಥಸಂಚಲನಕ್ಕಾಗಿ ಪ್ರಥಮ ಬಹುಮಾನವನ್ನು ಕಂಪಲಾಪುರದ ನಾಗವಿದ್ಯಾಸಂಸ್ಥೆ, ಹಿಟ್ನೆಬಾಗಿಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದ್ವಿತೀಯ ಬಹುಮಾನ ನೀಡಲಾಯಿತು. ಟಿಎಪಿಸಿಎಂಸಿ ನಿರ್ದೇಶಕ ಸ್ವಾಮಿ ಧ್ವಜಾರೋಹಣ ನೆರವೇರಿಸಿದರು.

ಪ್ರತಿಭಟನೆ ಇಂದು
ಮೈಸೂರು: ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಜ್ಯೋತಿ ಸಮಾಜ ಕಲ್ಯಾಣ ಕೇಂದ್ರವು  ಜು.30ರ ಬೆಳಗ್ಗೆ 10.30ಕ್ಕೆ ನಗರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.

ಎಲ್‌ಐಸಿ ಸ್ಪಷ್ಟನೆ
ಮೈಸೂರು: ಮೈಕ್ರೋ ವಿಮಾ ಪಾಲಿಸಿಗೆ ಸಂಬಂಧಿಸಿದಂತೆ ಎಲ್‌ಐಸಿಯ ಕೆಲವರು ಎನ್‌ಜಿಒಗಳೊಟ್ಟಿಗೆ ಶಾಮೀಲಾಗಿ, ಸಿಐಡಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಅಂಗನವಾಡಿ ಕಾರ್ಯಕರ್ತೆಯರ ಆರೋಪವು ನಿರಾಧಾರವಾಗಿದೆ ಎಂದು ಎಲ್‌ಐಸಿ ಹಿರಿಯ ವಿಭಾಗಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಎಲ್‌ಐಸಿಯು ಸಿಐಡಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ಅವರು ಕೇಳಿದ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ತನಿಖೆಯ ವರದಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಹೀಗಿರುವಾಗಲೂ ಪಾಲಿಸಿದಾರರು ಮರಣ ಹೊಂದಿದ ಸಂದರ್ಭಗಳಲ್ಲಿ ಒದಗಿಸಲ್ಪಟ್ಟ ದಾಖಲಾತಿಗಳ ಆಧಾರದ ಮೇಲೆ ಕ್ಲೇಮುಗಳನ್ನು ವಿಶೇಷವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!